عبدالسلام پوتیگه · ಕನ್ನಡ

1.ಇದು, ಸವಿಸ್ತಾರವಾಗಿ ವಿವರಿಸಿದ ವಚನಗಳಿರುವ ಗ್ರಂಥ – ಬುದ್ಧಿವಂತರಿಗಾಗಿ, ಅರಬೀ ಭಾಷೆಯಲ್ಲಿರುವ ಕುರ್‌ಆನ್‌
3.‘‘ನೀವು ನಮ್ಮನ್ನು ಯಾವುದರೆಡೆಗೆ ಕರೆಯುತ್ತಿರುವಿರೋ ಅದರ ಪಾಲಿಗೆ ನಮ್ಮ ಮನಸ್ಸುಗಳು ಮುಚ್ಚಿವೆ ಹಾಗೂ ನಮ್ಮ ಕಿವಿಗಳಲ್ಲಿ ಕಿವುಡಿದೆ ಮತ್ತು ನಮ್ಮ ಹಾಗೂ ನಿಮ್ಮ ನಡುವೆ ಒಂದು ತೆರೆ ಇದೆ. ನೀವು ನಿಮ್ಮ ಕೆಲಸ ಮಾಡಿರಿ ನಾವು ನಮ್ಮ ಕೆಲಸ ಮಾಡುವೆವು’’ ಎಂದು ಅವರು ಹೇಳುತ್ತಾರೆ
4.ಹೇಳಿರಿ; ನಾನು ಕೇವಲ ನಿಮ್ಮಂತಹ ಮಾನವ. ಏಕ ಮಾತ್ರ ದೇವರೇ ನಿಮ್ಮ ದೇವರೆಂದು ನನಗೆ ದಿವ್ಯವಾಣಿಯನ್ನು ಕಳಿಸಲಾಗಿದೆ. ನೀವು ಸ್ಥಿರವಾಗಿ ಅವನಿಗೆ ನಿಷ್ಠರಾಗಿರಿ ಮತ್ತು ಅವನಲ್ಲಿ ಕ್ಷಮೆಯಾಚಿಸಿರಿ. ಬಹುದೇವಾರಾಧಕರಿಗೆ ವಿನಾಶ ಕಾದಿದೆ
9.ತರುವಾಯ ಅವನು ಆಕಾಶದೆಡೆಗೆ ಗಮನ ಹರಿಸಿದನು. ಅದು ಹೊಗೆಯಾಗಿತ್ತು. ಅವನು ಅದರೊಡನೆ (ಆಕಾಶದೊಡನೆ) ಹಾಗೂ ಭೂಮಿಯೊಡನೆ, ಇಷ್ಟವಿದ್ದರೂ, ಇಲ್ಲದಿದ್ದರೂ ನೀವಿಬ್ಬರೂ ಮುಂದೆ ಬನ್ನಿ ಎಂದನು. ಅವೆರಡೂ, ‘‘ನಾವು ಸಂತೋಷದಿಂದ ಬಂದಿರುವೆವು’’ ಎಂದವು
10.ತರುವಾಯ ಅವನು ಎರಡು ದಿನಗಳಲ್ಲಿ, ಏಳು-ಆಕಾಶಗಳನ್ನು ನಿರ್ಮಿಸಿದನು ಹಾಗೂ ಪ್ರತಿಯೊಂದು ಆಕಾಶಕ್ಕೂ ಸೂಕ್ತ ಆದೇಶಗಳನ್ನು ನೀಡಿದನು ಮತ್ತು ನಾವು ಭೂಮಿಯ ಆಕಾಶವನ್ನು ದೀಪ (ನಕ್ಷತ್ರ) ಗಳಿಂದ ಅಲಂಕರಿಸಿದೆವು ಹಾಗೂ ಅದನ್ನು ರಕ್ಷಾಕವಚವಾಗಿ ಮಾಡಿದೆವು
12.ಅವರ ಬಳಿಗೆ ದೂತರು ಬಂದು, ಅಲ್ಲಾಹನ ಹೊರತು ಅನ್ಯರನ್ನು ಆರಾಧಿಸಬೇಡಿ ಎಂದು ಅವರ ಮುಂದೆಯೂ ಹಿಂದೆಯೂ ಮನವಿ ಮಾಡಿದ್ದರು. ಆಗ ಅವರು, ನಮ್ಮ ಒಡೆಯನು ಬಯಸಿದ್ದರೆ ಖಂಡಿತ ಮಲಕ್‌ಗಳನ್ನು (ದೂತರಾಗಿ) ಕಳಿಸುತ್ತಿದ್ದನು. ನೀವು ತಂದಿರುವ ಸಂದೇಶವನ್ನು ನಾವು ಧಿಕ್ಕರಿಸುತ್ತೇವೆ ಎಂದಿದ್ದರು
13.ಅತ್ತ, ಆದ್ ಜನಾಂಗದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ಮೆರೆಯ ತೊಡಗಿದ್ದರು. ಯಾರಿದ್ದಾರೆ, ನಮಗಿಂತ ಬಲಿಷ್ಠರು? ಎಂದು ಅವರು ಕೇಳುತ್ತಿದ್ದರು. ಅವರನ್ನು ಸೃಷ್ಟಿಸಿರುವ ಅಲ್ಲಾಹನು ಅವರಿಗಿಂತ ಬಲಿಷ್ಠನೆಂಬುದನ್ನು ಅವರು ಕಾಣುತ್ತಿಲ್ಲವೇ? ಅವರು ನಮ್ಮ ವಚನಗಳನ್ನು ತಿರಸ್ಕರಿಸಿದ್ದರು
14.ಕೊನೆಗೆ ನಾವು ಇಹಲೋಕದಲ್ಲೇ ಅವರಿಗೆ ಅಪಮಾನದ ಶಿಕ್ಷೆಯನ್ನು ಉಣಿಸಲಿಕ್ಕಾಗಿ ಕೆಲವು ಕೆಟ್ಟ ದಿನಗಳಲ್ಲಿ ಅವರ ಮೇಲೆ ಭಾರೀ ವೇಗದ ಚಂಡಮಾರುತವನ್ನು ಎರಗಿಸಿದೆವು. ಪರಲೋಕದ ಶಿಕ್ಷೆಯು ಇದಕ್ಕಿಂತಲೂ ಹೆಚ್ಚು ಅಪಮಾನಕಾರಿಯಾಗಿರುವುದು ಮತ್ತು ಅವರಿಗೆ ಯಾವ ನೆರವೂ ಸಿಗದು
15.ಸಮೂದ್ ಜನಾಂಗದವರಿಗೆ ನಾವು ಸರಿದಾರಿಯನ್ನು ತೋರಿಸಿದೆವು. ಆದರೆ, ಅವರು ಸರಿದಾರಿಯನ್ನು ಕಾಣುವ ಬದಲು ಕುರುಡರಾಗಿರಲು ಇಷ್ಟಪಟ್ಟರು. ಕೊನೆಗೆ ಅವರ ಕೃತ್ಯಗಳ ಫಲವಾಗಿ ಒಂದು ಭೀಕರ ಚಂಡ ಮಾರುತವು, ಅಪಮಾನಕಾರಿ ಶಿಕ್ಷೆಯಾಗಿ ಅವರನ್ನು ಆವರಿಸಿಕೊಂಡಿತು
19.ಅವರು ತಮ್ಮ ಚರ್ಮಗಳೊಡನೆ, ನೀವೇಕೆ ನಮ್ಮ ವಿರುದ್ಧ ಸಾಕ್ಷ ಹೇಳಿದಿರಿ? ಎಂದು ಕೇಳುವರು. ಆಗ ಅವು ಹೇಳುವವು; ಎಲ್ಲ ವಸ್ತುಗಳನ್ನು ಮಾತನಾಡಿಸಿರುವ ಅಲ್ಲಾಹನೇ ನಮ್ಮನ್ನೂ ಮಾತನಾಡಿಸಿರುವನು. ಅವನೇ ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದವನು ಮತ್ತು ಅವನ ಕಡೆಗೇ ನಿಮ್ಮನ್ನು ಮರಳಿಸಲಾಗಿದೆ
20.ನೀವು ಗುಟ್ಟಾಗಿ ಕೆಲವು (ಪಾಪ) ಕೃತ್ಯ ಗಳನ್ನು ಮಾಡುತ್ತಿದ್ದಾಗ, ನಿಮ್ಮ ಕಿವಿಗಳಾಗಲಿ, ನಿಮ್ಮ ಕಣ್ಣುಗಳಾಗಲಿ, ನಿಮ್ಮ ಚರ್ಮಗಳಾಗಲಿ ನಿಮ್ಮ ವಿರುದ್ಧ ಸಾಕ್ಷ ಹೇಳಲಾರವು ಎಂದು ನೀವು ಭಾವಿಸಿದ್ದಿರಿ. ಮಾತ್ರವಲ್ಲ, ನೀವಂತು, ನಿಮ್ಮ ಹೆಚ್ಚಿನ ಕರ್ಮಗಳ ಕುರಿತು ಅಲ್ಲಾಹನಿಗೂ ತಿಳಿದಿರುವುದಿಲ್ಲ ಎಂದು ಭಾವಿಸಿ ಕೊಂಡಿದ್ದಿರಿ
23.(ಇಹಲೋಕದಲ್ಲಿ) ನಾವು ಅವರಿಗೆ ಕೆಲವು ಸಂಗಾತಿಗಳನ್ನು ನೇಮಿಸಿರುವೆವು. ಅವರು, ಅವರ ಮುಂದಿರುವ ಹಾಗೂ ಹಿಂದಿರುವ ಎಲ್ಲವನ್ನೂ ಅವರಿಗೆ ಚಂದಗಾಣಿಸಿಕೊಡುತ್ತಾರೆ. ಅವರ ವಿರುದ್ಧ ಹಾಗೂ ಅವರಿಗಿಂತ ಹಿಂದೆ ಬದುಕಿದ್ದ ಜಿನ್ನ್ ಹಾಗೂ ಮಾನವ ಸಮುದಾಯಗಳ ವಿರುದ್ಧ (ಅಲ್ಲಾಹನ) ಮಾತು ಅನುಷ್ಠಾನವಾಗಿ ಬಿಟ್ಟಿತು. ಅವರು ಖಂಡಿತ ನಷ್ಟ ಅನುಭವಿಸುವವರಾಗಿದ್ದರು
28.ಅಲ್ಲಾಹನೇ ನಮ್ಮ ಒಡೆಯನೆಂದು ಘೋಷಿಸಿದವರು ಮತ್ತು ಸ್ಥಿರವಾಗಿ ನಿಂತವರು – ಅವರಿಗಾಗಿ ಖಂಡಿತ ನಾವು ಮಲಕ್‌ಗಳನ್ನು ಇಳಿಸಿ ಕೊಡುವೆವು. (ಅವರು ಸಾಂತ್ವನ ಹೇಳುವರು;) ನೀವು ಅಂಜಬೇಡಿ ಮತ್ತು ದುಃಖಿಸಬೇಡಿ. ನಿಮಗೆ ಸ್ವರ್ಗದ ವಾಗ್ದಾನ ನೀಡಲಾಗುತ್ತಿದೆ. ಆ ಕುರಿತು ಸಂತೋಷ ಪಡಿರಿ
35.ರಾತ್ರಿ ಮತ್ತು ಹಗಲು, ಸೂರ್ಯ ಮತ್ತು ಚಂದ್ರ (ಇವೆಲ್ಲಾ) ಅವನ (ಅಲ್ಲಾಹನ) ಪುರಾವೆಗಳ ಸಾಲಿಗೆ ಸೇರಿವೆ. ನೀವು ನಿಜಕ್ಕೂ ಅವನನ್ನೇ ಪೂಜಿಸುವವರಾಗಿದ್ದರೆ, ಸೂರ್ಯನಿಗಾಗಲಿ ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಸಾಷ್ಟಾಂಗವೆರಗಿರಿ
37.ಇದು ಅವನ (ಅಲ್ಲಾಹನ) ಪುರಾವೆಗಳಲ್ಲೊಂದು; ಭೂಮಿಯು ತೀರಾ ಒಣಗಿರುವುದನ್ನು ನೀವು ಕಾಣುತ್ತೀರಿ. ಆದರೆ, ನಾವು ಅದರ ಮೇಲೆ ನೀರನ್ನು ಇಳಿಸಿದಾಗ ಅದು ನಳನಳಿಸತೊಡಗುತ್ತದೆ ಹಾಗೂ ಅರಳಿ ಬಿಡುತ್ತದೆ. ಖಂಡಿತವಾಗಿಯೂ ಅದನ್ನು ಜೀವಂತಗೊಳಿಸಿದವನೇ, ಸತ್ತವರನ್ನು ಜೀವಂತಗೊಳಿಸುವನು. ಅವನು ಖಂಡಿತ ಎಲ್ಲವನ್ನೂ ಮಾಡ ಬಲ್ಲವನಾಗಿದ್ದಾನೆ
38.ನಮ್ಮ ವಚನಗಳನ್ನು ತಿರುಚುವವರು ನಮ್ಮಿಂದ ಕಣ್ಮರೆಯಾಗಿಲ್ಲ. ಪುನರುತ್ಥಾನ ದಿನ ಬೆಂಕಿಗೆ ಎಸೆಯಲ್ಪಡುವವನು ಉತ್ತಮನೋ ಅಥವಾ ಅಂದು ಸುರಕ್ಷಿತ ಸ್ಥಿತಿಯಲ್ಲಿ ಹಾಜರಾಗುವವನು ಉತ್ತಮನೋ? ಸದ್ಯ ನೀವು ನಿಮಗಿಷ್ಟವಿರುವುದನ್ನು ಮಾಡಿರಿ. ಖಂಡಿತವಾಗಿಯೂ ಅವನು (ಅಲ್ಲಾಹನು) ನೀವು ಮಾಡುವ ಎಲ್ಲವನ್ನೂ ನೋಡುತ್ತಿದ್ದಾನೆ
42.ನಾವು ಅರಬೇತರ ಭಾಷೆಯಲ್ಲಿ ಕುರ್‌ಆನನ್ನು ಕಳಿಸಿದ್ದರೆ, ಅವರು, ಇದರ ವಚನಗಳೇಕೆ ಸ್ಪಷ್ಟವಾಗಿಲ್ಲ? ಅರಬೇತರ ಗ್ರಂಥ ಮತ್ತು ಅರಬೀ ದೂತನೇ? ಎನ್ನುತ್ತಿದ್ದರು. ಹೇಳಿರಿ; ಇದು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಗುಣಕಾರಿಯಾಗಿದೆ. ನಂಬದವರ ಕಿವಿಗಳು ಕಿವುಡಾಗಿವೆ ಮತ್ತು ಇದು ಅವರ ಪಾಲಿನ ಕುರುಡುತನವಾಗಿದೆ. ಅವರ ಸ್ಥಿತಿಯು ಬಹು ದೂರದಿಂದ ಕರೆಯಲ್ಪಡುವವರಂತಿದೆ
43.ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು. ಆ ಕುರಿತು ಭಿನ್ನತೆಗಳು ಎದುರಾದವು. ನಿಮ್ಮ ಒಡೆಯನ ಕಡೆಯಿಂದ ಒಂದು ವಿಷಯವು ಮೊದಲೇ ನಿಗದಿಯಾಗದೆ ಇದ್ದಿದ್ದರೆ, ಅವರ ವಿಷಯದಲ್ಲಿ ತೀರ್ಪು ಬಂದು ಬಿಡುತ್ತಿತ್ತು. ಅವರು ಖಂಡಿತ ಈ ಕುರಿತು ಸಂಶಯದಲ್ಲಿದ್ದಾರೆ
45.ಅಂತಿಮ ಘಳಿಗೆಯ ಕುರಿತಾದ ಜ್ಞಾನವು ಅವನ (ಅಲ್ಲಾಹನ) ವಶದಲ್ಲೇ ಇದೆ. ಅವನಿಗೆ ಅರಿವಿಲ್ಲದೆ ಯಾವ ಹಣ್ಣೂ ತನ್ನ ಗೊನೆಯಿಂದ ಹೊರ ಹೊಮ್ಮಲಾರದು, ಯಾವ ಹೆಣ್ಣೂ ಗರ್ಭ ಧರಿಸಲಾರಳು ಮತ್ತು ಪ್ರಸವಿಸಲಾರಳು. ‘‘ಎಲ್ಲಿದ್ದಾರೆ ನನ್ನ ಪಾಲುದಾರರು?’’ ಎಂದು ಆ ದಿನ ಅವನು ಅವರೊಡನೆ ಕೂಗಿ ಕೇಳುವನು. ಅವರು ಹೇಳುವರು; ‘‘ನಾವು ನಿನಗೆ ತಿಳಿಸಿರುವೆವು, ನಮ್ಮಲ್ಲೊಬ್ಬರೂ ಅದರ ಸಮರ್ಥಕರಲ್ಲ’’
48.ಸಂಕಟದ ಬಳಿಕ ನಾವು ಅವನಿಗೆ ನಮ್ಮ ಅನುಗ್ರಹದ ರುಚಿ ಉಣಿಸಿದರೆ, ಅವನು ಖಂಡಿತ ಹೀಗೆನ್ನುತ್ತಾನೆ; ‘‘ಇದಂತು ನನಗೆ ಸಿಗಲೇ ಬೇಕಾದದ್ದು. ಅಂತಿಮ ಘಳಿಗೆಯೊಂದು ಬರಲಿದೆಯೆಂದು ನಾನು ಭಾವಿಸುವುದಿಲ್ಲ. ಒಂದು ವೇಳೆ ನನ್ನನ್ನು ನನ್ನೊಡೆಯನ ಕಡೆಗೆ ಮರಳಿಸಲಾದರೂ ಅವನ ಬಳಿಯೂ ನನಗೆ ಹಿತವೇ ಸಿಗುವುದು‘‘. ನಿಜವಾಗಿ ನಾವು ಧಿಕ್ಕಾರಿಗಳಿಗೆ, ಅವರು ಏನೆಲ್ಲಾ ಮಾಡಿದ್ದರೆಂಬುದನ್ನು ತಿಳಿಸುವೆವು ಮತ್ತು ಅವರಿಗೆ ಬಹಳ ಕಠೋರ ಶಿಕ್ಷೆಯ ರುಚಿಯನ್ನು ಉಣಿಸುವೆವು
49.ನಾವು ಮನುಷ್ಯನಿಗೆ ನಮ್ಮ ಕೊಡುಗೆಗಳನ್ನು ದಯಪಾಲಿಸಿದಾಗ ಅವನು ಮುಖ ತಿರುಗಿಸಿಕೊಂಡು, ನಿರ್ಲಕ್ಷ ತೋರುತ್ತಾನೆ. ಆದರೆ ಅವನಿಗೆ ಕೆಟ್ಟದೇನಾದರೂ ಸಂಭವಿಸಿದರೆ ಅವನು ಭಾರೀ ಉದ್ದುದ್ದ ಪ್ರಾರ್ಥನೆಗಳನ್ನು ಸಲ್ಲಿಸುವವನಾಗಿ ಬಿಡುತ್ತಾನೆ