عبدالسلام پوتیگه · ಕನ್ನಡ

1.ಅವನು ಪಾಪಗಳನ್ನು ಕ್ಷಮಿಸುವವನು, ಪಶ್ಚಾತ್ತಾಪ ಸ್ವೀಕರಿಸುವವನು, ತೀವ್ರವಾಗಿ ದಂಡಿಸುವವನು ಮತ್ತು ತುಂಬಾ ಸಮರ್ಥನಾಗಿದ್ದಾನೆ. ಅವನ ಹೊರತು ಬೇರಾರೂ ಪೂಜಾರ್ಹರಲ್ಲ. ಕೊನೆಗೆ (ಎಲ್ಲರೂ) ಅವನೆಡೆಗೇ ಮರಳಬೇಕಾಗಿದೆ
3.ಅವರಿಗಿಂತ ಹಿಂದೆ ನೂಹರ ಜನಾಂಗದವರು ಮತ್ತು ಅವರ ಬಳಿಕ ದಂಡುಗಳು (ಸತ್ಯವನ್ನು) ತಿರಸ್ಕರಿಸಿದ್ದಾರೆ. ಪ್ರತಿಯೊಂದು ಸಮುದಾಯದವರೂ ತಮ್ಮ ದೇವದೂತರನ್ನು ಸೆರೆ ಹಿಡಿಯಲು ನಿರ್ಧರಿಸಿದ್ದರು ಹಾಗೂ ಅನ್ಯಾಯವಾಗಿ ಅವರೊಡನೆ ಜಗಳಾಡಿ ಆಮೂಲಕ ಸತ್ಯವನ್ನು ಹತ್ತಿಕ್ಕಲು ಶ್ರಮಿಸಿದರು. ಕೊನೆಗೆ ನಾವು ಅವರನ್ನು ದಂಡಿಸಿದೆವು. ಕೊನೆಗೆ ನಮ್ಮ ಶಿಕ್ಷೆ ಹೇಗಿತ್ತೆಂದು (ನೋಡಿರಿ)
5.ವಿಶ್ವ ಸಿಂಹಾಸನವನ್ನು ಹೊತ್ತಿರುವವರು ಮತ್ತು ಅದರ ಸುತ್ತ ಇರುವವರು (ಮಲಕ್‌ಗಳು) ತಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವರ ಪಾವಿತ್ರವನ್ನು ಜಪಿಸುತ್ತಿರುತ್ತಾರೆ. ಅವರು ಅವನಲ್ಲಿ ನಂಬಿಕೆ ಇಟ್ಟಿರುತ್ತಾರೆ ಮತ್ತು ವಿಶ್ವಾಸಿಗಳ ಪರವಾಗಿ ಕ್ಷಮೆಯಾಚಿಸುತ್ತಿರುತ್ತಾರೆ; ‘‘ನಮ್ಮೊಡೆಯಾ, ನಿನ್ನ ಕೃಪೆ ಹಾಗೂ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ಪಶ್ಚಾತ್ತಾಪ ಪಡುವವರನ್ನು ಹಾಗೂ ನಿನ್ನ ಮಾರ್ಗವನ್ನು ಅನುಸರಿಸುವವರನ್ನು ಕ್ಷಮಿಸಿಬಿಡು ಮತ್ತು ಅವರನ್ನು ನರಕದ ಶಿಕ್ಷೆಯಿಂದ ರಕ್ಷಿಸು’’
6.‘‘ನಮ್ಮೊಡೆಯಾ, ಅವರನ್ನು ಹಾಗೂ ಅವರ ತಾತ ಮುತ್ತಾತಂದಿರು, ಅವರ ಪತ್ನಿಯರು ಹಾಗೂ ಅವರ ಸಂತತಿಗಳ ಪೈಕಿ ಸಜ್ಜನರಾಗಿರುವವರನ್ನು, ನೀನು ಅವರಿಗೆ ವಾಗ್ದಾನ ಮಾಡಿರುವಂತಹ ಶಾಶ್ವತ ಸ್ವರ್ಗೋದ್ಯಾನಗಳೊಳಗೆ ಸೇರಿಸು. ಖಂಡಿತವಾಗಿಯೂ ನೀನು ಪ್ರಬಲನೂ ಯುಕ್ತಿವಂತನೂ ಆಗಿರುವೆ’’
8.(ಪರಲೋಕದಲ್ಲಿ) ಧಿಕ್ಕಾರಿಗಳನ್ನು ಖಂಡಿತ ಕರೆಯಲಾಗುವುದು (ಮತ್ತು ಹೇಳಲಾಗುವುದು;) ‘‘ಇಂದು ನಿಮ್ಮ ಕುರಿತು ಸ್ವತಃ ನಿಮಗೇ ಜಿಗುಪ್ಸೆ ಇದೆ. ಆದರೆ, (ಈ ಹಿಂದೆ) ವಿಶ್ವಾಸದೆಡೆಗೆ ನಿಮ್ಮನ್ನು ಕರೆಯಲಾದ ವೇಳೆ, ನೀವು ಧಿಕ್ಕರಿಸಿದಾಗ, ಇದಕ್ಕಿಂತ ಹೆಚ್ಚಿನ ಜಿಗುಪ್ಸೆ, ನಿಮ್ಮ ಕುರಿತು ಅಲ್ಲಾಹನಿಗಿತ್ತು’’
10.(ಅವರೊಡನೆ ಹೇಳಲಾಗುವುದು;) ‘‘ನಿಮಗೆ ಹೀಗಾಗಿರುವುದು ಏಕೆಂದರೆ, ಒಬ್ಬ ಅಲ್ಲಾಹನನ್ನು ಪ್ರಾರ್ಥಿಸುವಾಗ ನೀವು ಧಿಕ್ಕರಿಸುತ್ತಿದ್ದಿರಿ ಮತ್ತು (ಯಾರನ್ನಾದರೂ) ಅವನ ಜೊತೆ ಪಾಲುಗೊಳಿಸಲಾದಾಗ ನೀವು ನಂಬುತ್ತಿದ್ದಿರಿ. ಅಧಿಕಾರವು, ಉನ್ನತನೂ ಮಹಾನನೂ ಆಗಿರುವ ಅಲ್ಲಾಹನಿಗೇ ಸೇರಿದೆ’’
19.ಅವರೇನು ಭೂಮಿಯಲ್ಲಿ ನಡೆದಾಡಿ, ತಮಗಿಂತ ಹಿಂದೆ ಇದ್ದವರ ಗತಿ ಏನಾಯಿತೆಂಬುದನ್ನು ನೋಡುವುದಿಲ್ಲವೇ? ಅವರು ಇವರಿಗಿಂತ ಹೆಚ್ಚು ಶಕ್ತಿ ಶಾಲಿಗಳಾಗಿದ್ದರು ಮತ್ತು ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟು ಹೋಗಿದ್ದರು. ಕೊನೆಗೆ ಅಲ್ಲಾಹನು ಅವರ ಪಾಪಗಳ ಕಾರಣ ಅವರನ್ನು ದಂಡಿಸಿದನು ಮತ್ತು ಅವರನ್ನು ಅಲ್ಲಾಹನಿಂದ ರಕ್ಷಿಸ ಬಲ್ಲವರು ಯಾರೂ ಇರಲಿಲ್ಲ
20.ಇದೇಕೆಂದರೆ, ಅವರ ದೂತರು ಅವರ ಬಳಿಗೆ ಬಹಳ ಸ್ಪಷ್ಟ ಪುರಾವೆಗಳನ್ನು ತಂದಿದ್ದರು. ಆದರೂ ಅವರು ಧಿಕ್ಕರಿಸಿದ್ದರು ಮತ್ತು ಅಲ್ಲಾಹನು ಅವರನ್ನು ದಂಡಿಸಿದನು. ಅವನು ಖಂಡಿತ ಬಹಳ ಶಕ್ತಿಶಾಲಿಯಾಗಿದ್ದಾನೆ ಹಾಗೂ ಕಠೋರ ಶಿಕ್ಷೆ ನೀಡುವವನಾಗಿದ್ದಾನೆ
23.ಅವರು ನಮ್ಮ ಕಡೆಯಿಂದ ಸತ್ಯದೊಂದಿಗೆ ಅವರ ಬಳಿಗೆ ತಲುಪಿದಾಗ ಅವರು, ‘‘ಅವನ ಜೊತೆ ವಿಶ್ವಾಸಿಗಳಾಗಿರುವವರ ಪುತ್ರರನ್ನೆಲ್ಲಾ ಕೊಂದು ಬಿಡಿ ಮತ್ತು ಅವರ ಪುತ್ರಿಯರನ್ನು ಮಾತ್ರ ಜೀವಂತ ಬಿಟ್ಟು ಬಿಡಿ’’ ಎಂದರು. ಆದರೆ, ಧಿಕ್ಕಾರಿಗಳ ಸಂಚು ವಿಫಲವಾಗಿಬಿಟ್ಟಿತು
26.ಮತ್ತು ಫಿರ್‌ಔನ್‌ನ ಬಳಗದಲ್ಲಿದ್ದ ಹಾಗೂ ತನ್ನ ನಂಬಿಕೆಯನ್ನು ಗುಪ್ತವಾಗಿಟ್ಟಿದ್ದ ವಿಶ್ವಾಸಿಯೊಬ್ಬನು ಹೇಳಿದನು; ‘‘ನೀವೇನು, ಅಲ್ಲಾಹನೇ ನನ್ನೊಡೆಯನೆಂದು ಹೇಳಿದ ಮಾತ್ರಕ್ಕೆ, ನಿಮ್ಮೆಡೆಯನ ಕಡೆಯಿಂದ ಸ್ಪಷ್ಟ ನಿದರ್ಶನಗಳನ್ನು ತಂದಿರುವ ವ್ಯಕ್ತಿಯೊಬ್ಬನನ್ನು ಕೊಂದು ಬಿಡುವಿರಾ? ಒಂದು ವೇಳೆ ಅವನು ಸುಳ್ಳುಗಾರನಾಗಿದ್ದರೆ, ಅವನ ಸುಳ್ಳಿನ ಹೊಣೆಯು ಅವನ ಮೇಲೆಯೇ ಇರುವುದು. ಇನ್ನು, ಅವನು ಸತ್ಯವಂತನಾಗಿದ್ದರೆ, ಅವನು ನಿಮಗೆ ವಾಗ್ದಾನ ಮಾಡಿರುವ ಶಿಕ್ಷೆಯ ಒಂದಷ್ಟು ಭಾಗವಂತು ನಿಮಗೆ ಖಂಡಿತ ಸಿಗಲಿದೆ. ಅಲ್ಲಾಹನು ಅತಿಕ್ರಮಿಯಾಗಿರುವ ಸುಳ್ಳುಗಾರನಿಗೆ ಖಂಡಿತ ಸರಿದಾರಿಯನ್ನು ತೋರಿಸುವುದಿಲ್ಲ’’
27.‘‘ನನ್ನ ಜನಾಂಗದವರೇ, ಇಂದು ಆಧಿಪತ್ಯವು ನಿಮಗೆ ಸೇರಿದೆ. ನೀವು ಭೂಮಿಯಲ್ಲಿ ಪ್ರಭಾವಶಾಲಿಗಳಾಗಿರುವಿರಿ. ಆದರೆ, ಅಲ್ಲಾಹನ ಪ್ರಕೋಪವು ನಮ್ಮ ಮೇಲೆ ಬಂದೆರಗಿದರೆ, ಯಾರು ತಾನೇ ನಮಗೆ ನೆರವಾಗಬಲ್ಲರು?’’ ಫಿರ್‌ಔನ್ ಹೇಳಿದನು; ನಾನು ನನಗೆ ತೋಚಿದ್ದನ್ನೇ ನಿಮಗೆ ಹೇಳುತ್ತಿದ್ದೇನೆ ಮತ್ತು ನಾನು ನಿಮಗೆ ಒಳಿತಿನ ದಾರಿಯನ್ನೇ ತೋರಿಸುತ್ತಿದ್ದೇನೆ’’
32.ಈ ಹಿಂದೆ ನಿಮ್ಮ ಬಳಿಗೆ ಯೂಸುಫರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ, ಅವರು ನಿಮ್ಮ ಬಳಿಗೆ ತಂದಿದ್ದ ಸಂದೇಶದ ಕುರಿತು ನೀವು ಸಂಶಯಗ್ರಸ್ತರಾಗಿದ್ದಿರಿ. ಕೊನೆಗೆ ಅವರು ಮೃತರಾದಾಗ ನೀವು, ಅವರ ಬಳಿಕ ಅಲ್ಲಾಹನು ಇನ್ನಾರನ್ನೂ ದೂತರಾಗಿ ಕಳಿಸಲಾರನೆಂದು ಹೇಳಿದಿರಿ. ಅತಿಕ್ರಮಿಯಾಗಿರುವ ಸಂಶಯಗ್ರಸ್ತನನ್ನು ಅಲ್ಲಾಹನು ಇದೇ ರೀತಿ ದಾರಿಗೆಡಿಸುತ್ತಾನೆ
33.ಅವರು ತಮ್ಮ ಬಳಿಗೆ ಯಾವುದೇ ಪ್ರಮಾಣ ಬಂದಿಲ್ಲದಿದ್ದರೂ, ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುತ್ತಾರೆ. ಇದು ಅಲ್ಲಾಹನ ಬಳಿಯಲ್ಲೂ, ಸತ್ಯವಿಶ್ವಾಸಿಗಳ ಬಳಿಯಲ್ಲೂ ತೀರಾ ಅಪ್ರಿಯ ವಿಷಯವಾಗಿದೆ. ಅಹಂಕಾರಿ ಹಾಗೂ ವಿದ್ರೋಹಿಯಾಗಿರುವ ಪ್ರತಿಯೊಬ್ಬನ ಹೃದಯದ ಮೇಲೂ ಅಲ್ಲಾಹನು ಇದೇ ರೀತಿ ಮುದ್ರೆಯೊತ್ತಿ ಬಿಟ್ಟಿರುತ್ತಾನೆ
35.‘‘ಆಕಾಶದ ಆ ದಾರಿಗಳ ಮೂಲಕ ನಾನು ಮೂಸಾರ ದೇವರೆಡೆಗೆ ಇಣುಕಿ ನೋಡುವೆನು. ನಾನಂತು ಆತ (ಮೂಸಾ)ನನ್ನು ಸುಳ್ಳುಗಾರನೆಂದೇ ಭಾವಿಸುತ್ತೇನೆ’’. ಈ ರೀತಿ ಫಿರ್‌ಔನ್‌ನ ಪಾಲಿಗೆ ಆತನ ದುಷ್ಟ ಕೃತ್ಯಗಳನ್ನು ಚಂದಗಾಣಿಸಿ ಬಿಡಲಾಯಿತು ಮತ್ತು ಅವನನ್ನು ನೇರ ಮಾರ್ಗದಿಂದ ತಡೆಯಲಾಯಿತು. ಕೊನೆಗೆ ಫಿರ್‌ಔನನ ಎಲ್ಲ ಸಂಚುಗಳೂ ವಿಫಲವಾಗಿಬಿಟ್ಟವು
38.‘‘ದುಷ್ಟ ಕರ್ಮಗಳನ್ನು ಮಾಡಿದವನಿಗೆ ಅಂತಹದೇ ಪ್ರತಿಫಲ ಸಿಗುವುದು ಮತ್ತು ಸತ್ಕರ್ಮಗಳನ್ನು ಮಾಡಿದ ವ್ಯಕ್ತಿ, ಪುರುಷನಿರಲಿ, ಸ್ತ್ರೀ ಇರಲಿ, ವಿಶ್ವಾಸಿಯಾಗಿದ್ದರೆ, ಅವರೇ ಸ್ವರ್ಗವನ್ನು ಸೇರುವರು. ಅಲ್ಲಿ ಅವರಿಗೆ ಅಪಾರ ಸಂಪನ್ನತೆಯನ್ನು ನೀಡಲಾಗುವುದು’’
40.‘‘ಅಲ್ಲಾಹನನ್ನು ನಾನು ಧಿಕ್ಕರಿಸಬೇಕು ಹಾಗೂ ನನಗೆ ಅರಿವೇ ಇಲ್ಲದವುಗಳನ್ನು ಅವನ ಜೊತೆ ಪಾಲುಗೊಳಿಸಬೇಕೆಂದು ನೀವು ನನಗೆ ಕರೆ ನೀಡುತ್ತಿರುವಿರಿ. ಇತ್ತ ನಾನು ನಿಮ್ಮನ್ನು ಅತ್ಯಂತ ಪ್ರಬಲನೂ ಕ್ಷಮಾಶೀಲನೂ ಆಗಿರುವಾತನ (ಅಲ್ಲಾಹನ) ಕಡೆಗೆ ಆಮಂತ್ರಿಸುತ್ತಿದ್ದೇನೆ’’
41.‘‘ನೀವು ಯಾರೆಡೆಗೆ ನನ್ನನ್ನು ಆಮಂತ್ರಿಸುತ್ತಿರುವಿರೋ ಆತನಿಗೆ ಈ ಲೋಕದಲ್ಲಾಗಲಿ ಪರಲೋಕದಲ್ಲಾಗಲಿ ಖಂಡಿತ ಯಾವ ಸ್ಥಾನವೂ ಇಲ್ಲ. ಕೊನೆಗೆ ನಾವೆಲ್ಲರೂ ಅಲ್ಲಾಹನೆಡೆಗೆ ಮರಳಬೇಕಾಗಿದೆ. ಮತ್ತು ಅತಿಕ್ರಮಿಗಳೇ ನರಕ ವಾಸಿಗಳಾಗುವರು’’
45.ಮತ್ತು ಅವರು ನರಕದೊಳಗೆ ಪರಸ್ಪರ ಜಗಳಾಡುವರು. (ಇಹಲೋಕದಲ್ಲಿ) ದುರ್ಬಲರಾಗಿದ್ದವರು, ದೊಡ್ಡಸ್ತಿಕೆ ಮೆರೆಯುತ್ತಿದ್ದವರೊಡನೆ ಹೇಳುವರು; ‘‘(ಅಲ್ಲಿ) ನಾವು ನಿಮಗೆ ಅಧೀನರಾಗಿದ್ದೆವು. ನೀವೀಗ ಈ ಬೆಂಕಿಯನ್ನು ಸ್ವಲ್ಪ ಮಟ್ಟಿಗಾದರೂ ನಮ್ಮಿಂದ ನಿವಾರಿಸಬಲ್ಲಿರಾ?’’
48.ಅವರು (ಕಾವಲುಗಾರರು), ‘‘ನಿಮ್ಮ ಬಳಿಗೆ ನಿಮ್ಮ ದೂತರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು. ಅವರು, ‘‘ಹೌದು ಬಂದಿದ್ದರು’’ ಎನ್ನುವರು. ಆಗ ಅವರು (ಕಾವಲುಗಾರರು) ಹೇಳುವರು; ‘‘ಹಾಗಾದರೆ ನೀವೇ ಪ್ರಾರ್ಥಿಸಿರಿ. ಧಿಕ್ಕಾರಿಗಳ ಪ್ರಾರ್ಥನೆಯು ಸದಾ ನಿಷ್ಫಲವಾಗಿರುತ್ತದೆ’’
53.(ದೂತರೇ,) ನೀವು ಸಹನಶೀಲರಾಗಿರಿ. ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯವಾಗಿದೆ. ಮತ್ತು ನೀವು ನಿಮ್ಮ ಪಾಪಗಳಿಗಾಗಿ ಕ್ಷಮೆಯನ್ನು ಬೇಡಿರಿ. ಹಾಗೂ ಸಂಜೆ, ಮುಂಜಾನೆಗಳಲ್ಲಿ ನಿಮ್ಮೊಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸಿರಿ
54.ಖಂಡಿತವಾಗಿಯೂ, ತಮ್ಮ ಬಳಿಗೆ (ಅಲ್ಲಾಹನ ಕಡೆಯಿಂದ) ಯಾವುದೇ ಪ್ರಮಾಣ ಬಂದಿಲ್ಲದಿದ್ದರೂ, ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವವರ ಮನಸ್ಸುಗಳಲ್ಲಿ (ತಾವೇ ಮಾಹಾನರೆಂಬ) ಅಹಂಕಾರ ತುಂಬಿದೆ. ಆದರೆ, ಅವರೆಂದೂ ಅದನ್ನು (ಮಹಾನತೆಯನ್ನು) ಸಾಧಿಸಲಾರರು. ನೀವು ಅಲ್ಲಾಹನ ರಕ್ಷಣೆಯನ್ನು ಕೋರಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ
59.ನೀವು ವಿಶ್ರಾಂತಿ ಪಡುವುದಕ್ಕಾಗಿ ನಿಮಗಾಗಿ ರಾತ್ರಿಯನ್ನು ರೂಪಿಸಿದವನು ಹಾಗೂ ಹಗಲನ್ನು ಬೆಳಗಿಸಿದವನು ಅಲ್ಲಾಹನು. ಅಲ್ಲಾಹನು ತನ್ನ ದಾಸರ ಪಾಲಿಗೆ ಖಂಡಿತ ಉದಾರಿಯಾಗಿದ್ದಾನೆ. ಆದರೆ, ಜನರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ
62.ಅಲ್ಲಾಹನೇ ನಿಮ್ಮ ಪಾಲಿಗೆ ಭೂಮಿಯನ್ನು ವಾಸದ ನೆಲೆಯಾಗಿಸಿದವನು ಮತ್ತು ಆಕಾಶವನ್ನು ಚಪ್ಪರವಾಗಿಸಿದವನು ಮತ್ತು ನಿಮಗೆ ರೂಪವನ್ನು ನೀಡಿದವನು ಹಾಗೂ ನಿಮ್ಮ ರೂಪವನ್ನು ಅಂದಗೊಳಿಸಿದವನು ಮತ್ತು ನಿರ್ಮಲ ವಸ್ತುಗಳ ಮೂಲಕ ನಿಮಗೆ ಆಹಾರವನ್ನು ಒದಗಿಸಿದವನು. ಅವನೇ ನಿಮ್ಮ ಒಡೆಯನಾದ ಅಲ್ಲಾಹ್. ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನು ತುಂಬಾ ಸಮೃದ್ಧನು
64.(ದೂತರೇ,) ಹೇಳಿರಿ; ನನ್ನ ಬಳಿಗೆ ನನ್ನ ಒಡೆಯನ ಕಡೆಯಿಂದ ಸ್ಪಷ್ಟವಾದ ಪ್ರಮಾಣಗಳು ಬಂದಿರುವಾಗ, ಅಲ್ಲಾಹನ ಹೊರತು ನೀವು ಪ್ರಾರ್ಥಿಸುವವುಗಳನ್ನು ನಾನು ಪೂಜಿಸಬಾರದೆಂದು ನನ್ನನ್ನು ತಡೆಯಲಾಗಿದೆ. ಮತ್ತು ನಾನು ಎಲ್ಲ ಲೋಕಗಳ ಒಡೆಯನಿಗೆ ಶರಣಾಗಬೇಕೆಂದು ನನಗೆ ಆದೇಶಿಸಲಾಗಿದೆ
65.ಅವನೇ ನಿಮ್ಮನ್ನು (ಮೊದಲು) ಮಣ್ಣಿನಿಂದ, ಆ ಬಳಿಕ ವೀರ್ಯದಿಂದ ಮತ್ತು ಆ ಬಳಿಕ ಮಾಂಸ ಪಿಂಡದಿಂದ ಸೃಷ್ಟಿಸಿದವನು. ತರುವಾಯ ಅವನು ನಿಮ್ಮನ್ನು (ತಾಯಿಯ ಗರ್ಭದಿಂದ) ಶಿಶುವಾಗಿ ಹೊರತೆಗೆಯುತ್ತಾನೆ – ನೀವು ಯವ್ವನವನ್ನು ತಲುಪಲು ಹಾಗೂ ಆ ಬಳಿಕ ವೃದ್ಧರಾಗಿ ಬಿಡಲು. ನಿಮ್ಮಲ್ಲಿ ಕೆಲವರು ಅದಕ್ಕೆ ಮುನ್ನವೇ ಮೃತರಾಗಿ ಬಿಡುತ್ತಾರೆ ಮತ್ತು (ಇತರರು ಉಳಿದಿರುತ್ತಾರೆ) – ನೀವು ಒಂದು ನಿರ್ದಿಷ್ಟ ಅವಧಿಯನ್ನು ತಲುಪಬೇಕು ಹಾಗೂ ಬುದ್ಧಿವಂತರಾಗಬೇಕೆಂದು
75.(ದೂತರೇ,) ನೀವು ಸಹನಶೀಲರಾಗಿರಿ. ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯ. ನಾವು ಅವರಿಗೆ ವಾಗ್ದಾನ ಮಾಡಿರುವುದರ (ಆ ಶಿಕ್ಷೆಯ) ಒಂದಂಶವನ್ನು ನಿಮಗೆ ತೋರಿಸಿದರೂ ಅಥವಾ (ಅದಕ್ಕೆ ಮುನ್ನ) ನಿಮಗೆ ಮರಣವನ್ನು ನೀಡಿದರೂ ಅವರಂತು ನಮ್ಮ ಕಡೆಗೇ ಮರಳಿ ಬರಬೇಕಾಗಿದೆ
76.ನಾವು ನಿಮಗಿಂತ ಹಿಂದೆಯೂ ದೂತರನ್ನು ಕಳಿಸಿರುವೆವು. ಅವರಲ್ಲಿ ಕೆಲವರ ಸಮಾಚಾರವನ್ನು ನಾವು ನಿಮಗೆ ತಿಳಿಸಿರುವೆವು ಮತ್ತು ಇತರ ಕೆಲವರ ಸಮಾಚಾರವನ್ನು ನಿಮಗೆ ತಿಳಿಸಿಲ್ಲ. ಅಲ್ಲಾಹನ ಅನುಮತಿ ಇಲ್ಲದೆ ಯಾವುದೇ ದೂತನ ಬಳಿಗೆ ಒಂದು ವಚನವೂ ಬರುವುದಿಲ್ಲ. ಕೊನೆಗೆ, ಅಲ್ಲಾಹನ ಆದೇಶವು ಬಂದು ಬಿಟ್ಟಾಗ, ನ್ಯಾಯೋಚಿತವಾಗಿ ತೀರ್ಪು ನೀಡಿ ಬಿಡಲಾಗುತ್ತದೆ. ಆಗ ಮಿಥ್ಯವಾದಿಗಳು ನಷ್ಟದಲ್ಲಿರುತ್ತಾರೆ
80.ಅವರೇನು, ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ನೋಡಲು ಭೂಮಿಯಲ್ಲಿ ತಿರುಗಾಡುವುದಿಲ್ಲವೇ? ಅವರು ಸಂಖ್ಯೆಯಲ್ಲೂ ಶಕ್ತಿಯಲ್ಲೂ ಇವರಿಗಿಂತ ಬಲಿಷ್ಠರಾಗಿದ್ದರು ಮತ್ತು ಭೂಮಿಯಲ್ಲಿ ಭಾರೀ ಸ್ಮಾರಕಗಳನ್ನು ನಿರ್ಮಿಸಿದ್ದರು. ಆದರೆ, ಅವರ ಯಾವ ಗಳಿಕೆಯೂ ಅವರ ಪಾಲಿಗೆ ಉಪಯುಕ್ತವಾಗಲಿಲ್ಲ