عبدالسلام پوتیگه · ಕನ್ನಡ

1.ಅವರೇ, ಭಾರೀ ಕೆಟ್ಟ ಶಿಕ್ಷೆಗೆ ಗುರಿಯಾಗುವವರು ಮತ್ತು ಪರಲೋಕದಲ್ಲಿ ಅವರು ಅತ್ಯಧಿಕ ನಷ್ಟ ಅನುಭವಿಸುವರು
6.‘‘ನೀವು ನಿಮ್ಮ ಊರುಗೋಲನ್ನು ಕೆಳ ಹಾಕಿರಿ.’’ (ಮೂಸಾ ತಮ್ಮ ಊರುಗೋಲನ್ನು ಎಸೆದಾಗ) ಅದು ಹಾವಿನಂತೆ ಸರಿದಾಡುವುದನ್ನು ಕಂಡು, ಅವರು ಮರಳಿ ಹೊರಟರು ಮತ್ತು ಹಿಂದಿರುಗಿ ನೋಡಲಿಲ್ಲ. ಅವರೊಡನೆ ಹೇಳಲಾಯಿತು; ‘‘ಓ ಮೂಸಾ, ಅಂಜಬೇಡಿ. ದೂತರು ನನ್ನ ಬಳಿ ಖಂಡಿತ ಅಂಜುವುದಿಲ್ಲ’’
8.‘‘ನೀವೀಗ ನಿಮ್ಮ ಕೈಯನ್ನು ನಿಮ್ಮ ಅಂಗಿಯೊಳಗೆ ಹಾಕಿರಿ. ಅದು ಸುಲಭವಾಗಿ, ಪ್ರಕಾಶಿಸುತ್ತಾ ಹೊರಬರುವುದು. ಇದು ಫಿರ್‌ಔನ್ ಮತ್ತು ಅವನ ಜನಾಂಗದವರಿಗಾಗಿ ಇರುವ ಒಂಭತ್ತು ಪುರಾವೆಗಳಲ್ಲೊಂದು. ಅವರು ಖಂಡಿತ ಒಂದು ಅವಿಧೇಯ ಜನಾಂಗವಾಗಿದ್ದಾರೆ’’
15.ಮುಂದೆ, ಒಮ್ಮೆ ಅವರು ಇರುವೆಗಳಿದ್ದ ಒಂದು ಬಯಲಿಗೆ ಬಂದಾಗ ಒಂದು ಇರುವೆ ಹೇಳಿತು; ಇರುವೆಗಳೇ, ನೀವು ನಿಮ್ಮ ಮನೆಗಳೊಳಗೆ ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಪಡೆಗಳು ನಿಮ್ಮನ್ನು ತುಳಿದು ನಾಶಮಾಡದಿರಲಿ. ಅವರಿಗೆ ಅದರ ಅರಿವೂ ಇರುವುದಿಲ್ಲ
16.ಅದರ ಮಾತನ್ನು ಕೇಳಿ ಅವರು (ಸುಲೈಮಾನ್) ನಕ್ಕುಬಿಟ್ಟರು ಮತ್ತು ಹೇಳಿದರು; ನನ್ನೊಡೆಯಾ, ನೀನು ನನಗೆ ಹಾಗೂ ನನ್ನ ಹೆತ್ತವರಿಗೆ ಕರುಣಿಸಿರುವ ಅನುಗ್ರಹಗಳಿಗಾಗಿ ನಿನಗೆ ಕೃತಜ್ಞತೆ ಸಲ್ಲಿಸುವ ಮತ್ತು ನೀನು ಮೆಚ್ಚುವಂತಹ ಕರ್ಮಗಳನ್ನು ಮಾಡುವ ಸೌಭಾಗ್ಯವನ್ನು ನನಗೆ ಕರುಣಿಸು ಮತ್ತು ನಿನ್ನ ಅನುಗ್ರಹದಿಂದ ನೀನು ನನ್ನನ್ನು ನಿನ್ನ ಸಜ್ಜನ ದಾಸರ ಸಾಲಿಗೆ ಸೇರಿಸು
21.ಆಕೆ ಮತ್ತು ಆಕೆಯ ಜನಾಂಗದವರು ಅಲ್ಲಾಹನನ್ನು ಬಿಟ್ಟು ಸೂರ್ಯನಿಗೆ ಸಾಷ್ಟಾಂಗವೆರಗುವುದನ್ನು ನಾನು ನೋಡಿದೆ. ಶೈತಾನನು ಅವರಿಗೆ ಅವರ ಕರ್ಮಗಳನ್ನು ಚಂದಗಾಣಿಸಿದ್ದಾನೆ ಮತ್ತು ಸರಿದಾರಿಯಿಂದ ಅವರನ್ನು ತಡೆದಿದ್ದಾನೆ. ಅವರು ಸನ್ಮಾರ್ಗವನ್ನು ಆನುಸರಿಸುತ್ತಿಲ್ಲ
34.ಆತನು (ದೂತನು) ಸುಲೈಮಾನರ ಬಳಿ ಬಂದಾಗ ಅವರು ಹೇಳಿದರು; ನೀವೇನು ಸಂಪತ್ತಿನಿಂದ ನನಗೆ ನೆರವಾಗ ಬಯಸುತ್ತೀರಾ? ನನಗಂತು ಅಲ್ಲಾಹನು ನಿಮಗೆ ನೀಡಿದ್ದಕ್ಕಿಂತ ಉತ್ತಮವಾದುದನ್ನು ನೀಡಿದ್ದಾನೆ. ನೀವು ಮಾತ್ರ ನಿಮ್ಮ ಉಡುಗೊರೆಯಲ್ಲೇ ಸಂತುಷ್ಟರಾಗಿರುವಿರಿ
37.ಜಿನ್ನ್‌ಗಳ ಪೈಕಿ ಇಫ್ರೀತ್ ಹೇಳಿದನು; ನೀವು ನಿಮ್ಮ ಸ್ಥಾನದಿಂದ ಎದ್ದೇಳುವ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತಂದು ಬಿಡುತ್ತೇನೆ. ನಾನು ಈ ಕೆಲಸವನ್ನು ಮಾಡುವುದಕ್ಕೆ ಖಂಡಿತ ಶಕ್ತನಾಗಿದ್ದೇನೆ ಹಾಗೂ ವಿಶ್ವಾಸಾರ್ಹನಾಗಿದ್ದೇನೆ
38.ಗ್ರಂಥದ ಜ್ಞಾನವಿದ್ದವನೊಬ್ಬನು, ‘‘ನೀವು ಕಣ್ಮುಚ್ಚಿ ತೆರೆಯುವ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತಂದು ಬಿಡುತ್ತೇನೆ‘‘ಎಂದನು. ಅವರು (ಸುಲೈಮಾನ್) ಅದನ್ನು ತನ್ನ ಸಮೀಪ ಇಟ್ಟಿರುವುದಾಗಿ ಕಂಡಾಗ ಹೇಳಿದರು; ಇದು, ನಾನು ಕೃತಜ್ಞನಾಗುತ್ತೇನೋ ಕೃತಘ್ನತೆ ತೋರುತ್ತೇನೋ ಎಂದು ಪರೀಕ್ಷಿಸಲಿಕ್ಕಾಗಿ ನನ್ನ ಒಡೆಯನ ಕಡೆಯಿಂದ ಸಿಕ್ಕಿರುವ ಒಂದು ಅನುಗ್ರಹವಾಗಿದೆ. ಕೃತಜ್ಞನಾದವನು ಸ್ವತಃ ತನ್ನ ಲಾಭಕ್ಕಷ್ಟೇ ಕೃತಜ್ಞನಾಗುತ್ತಾನೆ ಮತ್ತು ಯಾರಾದರೂ ಕೃತಘ್ನತೆ ತೋರಿದರೆ – ನನ್ನ ಒಡೆಯನಂತು ಸಂಪೂರ್ಣ ನಿರಪೇಕ್ಷ ಹಾಗೂ ಉದಾರಿಯಾಗಿದ್ದಾನೆ
42.ಅರಮನೆಯನ್ನು ಪ್ರವೇಶಿಸು ಎಂದು ಆಕೆಯೊಡನೆ ಹೇಳಲಾಯಿತು. ಆಕೆ ಅದನ್ನು (ಅಲ್ಲಿಯ ನೆಲವನ್ನು) ಕಂಡಾಗ, ಅದು ಆಳವಾದ ನೀರೆಂದು ಭಾವಿಸಿ ತನ್ನ ವಸ್ತ್ರವನ್ನು ತನ್ನ ಪಾದಮಟ್ಟದಿಂದ ಮೇಲಕ್ಕೆ ಎಳೆದುಕೊಂಡಳು. ಅವರು (ಸುಲೈಮಾನ್) ಹೇಳಿದರು; ಇದು ಗಾಜುಗಳನ್ನು ಜೋಡಿಸಿ ಕಟ್ಟಿದ ಅರಮನೆ. ಆಕೆ ಹೇಳಿದಳು; ನನ್ನೊಡೆಯಾ, ನಾನು ನನ್ನ ಮೇಲೆಯೇ ಅಕ್ರಮವೆಸಗಿದ್ದೇನೆ ಮತ್ತು ಸುಲೈಮಾನರ ಜೊತೆ ನಾನು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಶರಣಾಗುತ್ತೇನೆ
45.ಅವರು (ಜನಾಂಗದವರು) ಹೇಳಿದರು; ನಾವಂತು, ನಿಮ್ಮನ್ನು ಹಾಗೂ ನಿಮ್ಮ ಜೊತೆಗೆ ಇರುವವರನ್ನು ಅಪಶಕುನವೆಂದೇ ತಿಳಿಯುತ್ತೇವೆ. ಅವರು (ಸ್ವಾಲಿಹ್) ಹೇಳಿದರು; ನಿಮ್ಮ ಅಪಶಕುನವೆಲ್ಲಾ ಅಲ್ಲಾಹನ ಬಳಿ ಇದೆ. ನಿಜವಾಗಿ ನೀವು ಪರೀಕ್ಷೆಗೆ ತುತ್ತಾಗಿರುವ ಜನಾಂಗವಾಗಿದ್ದೀರಿ
47.ಅವರು ಹೇಳತೊಡಗಿದರು; ನೀವೆಲ್ಲಾ ಅಲ್ಲಾಹನ ಆಣೆ ಹಾಕಿಕೊಳ್ಳಿರಿ. ನಾವು ರಾತ್ರಿಯ ವೇಳೆ ಆತನ ಮೇಲೂ ಆತನ ಮನೆಯವರ ಮೇಲೂ ಧಾಳಿ ಮಾಡೋಣ ಮತ್ತು ಅವನ ಮನೆಯವರು ನಾಶವಾದಾಗ ನಾವು ಹಾಜರಿರಲಿಲ್ಲವೆಂದೂ ನಾವು ಖಂಡಿತ ಸತ್ಯವಂತರೆಂದೂ ಅವನ ಉತ್ತರಾಧಿಕಾರಿಗಳೊಡನೆ ಹೇಳೋಣ
58.ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಮತ್ತು ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು (ಯಾರು)? ಮುಂದೆ ನಾವು ಅದರಿಂದ, ಭವ್ಯ ತೋಟಗಳನ್ನು ಬೆಳೆಸಿದೆವು. ಅವುಗಳಲ್ಲಿರುವ ಮರಗಳನ್ನು ಬೆಳೆಸಲು ನಿಮಗಂತು ಸಾಧ್ಯವಿರಲಿಲ್ಲ. (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ನಿಜವಾಗಿ ಅವರು ಜಗಳಗಂಟರಾಗಿದ್ದಾರೆ
59.ಭೂಮಿಯನ್ನು ವಾಸಕ್ಕೆ ಯೋಗ್ಯಗೊಳಿಸಿದವನು, ಅದರ ನಡುವೆ ನದಿ ನಾಲೆಗಳನ್ನು ಹರಿಸಿದವನು ಹಾಗೂ ಅದಕ್ಕಾಗಿ (ಭೂಮಿಗಾಗಿ) ಪರ್ವತಗಳನ್ನು ನಿರ್ಮಿಸಿದವನು ಮತ್ತು ಎರಡು ಸಮುದ್ರಗಳ ನಡುವೆ ತೆರೆಯನ್ನು ಕಟ್ಟಿರುವವನು ಯಾರು? (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಆದರೆ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ
60.ನೊಂದವನು ತನ್ನನ್ನು ಪ್ರಾರ್ಥಿಸಿದಾಗ ಅವನ ಮೊರೆಯನ್ನು ಕೇಳಿ ಸಂಕಟವನ್ನು ನಿವಾರಿಸುವವನು ಮತ್ತು ನಿಮ್ಮನ್ನು ಭೂಮಿಯ ಪ್ರತಿನಿಧಿಗಳಾಗಿ ಮಾಡಿದವನು ಯಾರು? ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಕೆಲವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ
61.ನೆಲಭಾಗದ ಹಾಗೂ ಸಮುದ್ರದ ಕತ್ತಲುಗಳಲ್ಲಿ ನಿಮಗೆ ದಾರಿತೋರಿಸುವವನು ಮತ್ತು ತನ್ನ ಅನುಗ್ರಹಕ್ಕೆ (ಮಳೆಗೆ) ಮುನ್ನ ಶುಭವಾರ್ತೆಯಾಗಿ ಗಾಳಿಯನ್ನು ಕಳಿಸುವವನು ಯಾರು? (ಇದನ್ನೆಲ್ಲಾ ಮಾಡಲು) ಆ ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ನೀವು ಅವನ ಜೊತೆ ಪಾಲು ಗೊಳಿಸುವ ಎಲ್ಲರಿಗಿಂತಲೂ ಅವನು ತುಂಬಾ ಉನ್ನತನು
62.ಸೃಷ್ಟಿ ಕ್ರಿಯೆಯನ್ನು ಆರಂಭಿಸಿದವನು ಮತ್ತು ಅದನ್ನು ಪುನರಾವರ್ತಿಸುವವನು ಯಾರು? ಮತ್ತು ನಿಮಗೆ ಆಕಾಶದಿಂದಲೂ ಭೂಮಿಯಿಂದಲೂ ಆಹಾರ ಒದಗಿಸುತ್ತಲಿರುವವನು ಯಾರು? (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಹೇಳಿರಿ; ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ
86.(ಇಂದು) ನೀವು ಪರ್ವತಗಳನ್ನು ಕಂಡು, ಅವು ಬಹಳ ಸ್ಥಿರವಾಗಿವೆ ಎಂದು ಭಾವಿಸುತ್ತೀರಿ. ಆದರೆ (ಅಂದು) ಅವುಗಳು ಮೋಡಗಳಂತೆ ಚಲಿಸುವವು. ಇದೆಲ್ಲಾ ಅಲ್ಲಾಹನ ಕೈಗಾರಿಕೆ. ಅವನು ಎಲ್ಲವನ್ನೂ ಬಹಳ ಪಕ್ವವಾಗಿಯೇ ರೂಪಿಸಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅವನು ಖಂಡಿತವಾಗಿ ಬಲ್ಲನು
90.ಮತ್ತು ನಾನು ಕುರ್‌ಆನ್‌ಅನ್ನು ಓದಬೇಕೆಂದು (ನನಗೆ ಆದೇಶಿಸಲಾಗಿದೆ). ಸರಿ ದಾರಿಗೆ ಬರುವವನು ಸ್ವತಃ ತನ್ನ ಹಿತಕ್ಕಾಗಿಯಷ್ಟೇ ಸರಿ ದಾರಿಗೆ ಬರುತ್ತಾನೆ. ಇನ್ನು ಯಾರಾದರೂ ದಾರಿಗೆಟ್ಟಿದ್ದರೆ, ನಾನಂತು ಕೇವಲ ಎಚ್ಚರಿಸುವವನಾಗಿದ್ದೇನೆ