عبدالسلام پوتیگه · ಕನ್ನಡ

1.ಇವು ಬಹಳ ಸ್ಪಷ್ಟವಾಗಿರುವ ಗ್ರಂಥದ ವಚನಗಳು
3.ಖಂಡಿತವಾಗಿಯೂ ಫಿರ್‌ಔನನು ಭೂಮಿಯಲ್ಲಿ ವಿದ್ರೋಹ ಮೆರೆದಿದ್ದನು ಮತ್ತು ಭೂವಾಸಿಗಳನ್ನು ಪಂಗಡಗಳಾಗಿ ವಿಂಗಡಿಸಿದ್ದನು. ಅವನು ಅವರಲ್ಲಿನ ಒಂದು ಪಂಗಡವನ್ನು ದುರ್ಬಲಗೊಳಿಸಿ ಅವರ ಪುತ್ರರ ಕೊರಳು ಕೊಯ್ದು ಬಿಡುತ್ತಿದ್ದನು ಹಾಗೂ ಅವರ ಮಹಿಳೆಯರನ್ನು ಮಾತ್ರ ಜೀವಂತವಿಡುತ್ತಿದ್ದನು. ಖಂಡಿತವಾಗಿಯೂ ಅವನು ಅಶಾಂತಿ ಹಬ್ಬುವವನಾಗಿದ್ದನು
6.ಮತ್ತು ನಾವು ಮೂಸಾರ ತಾಯಿಗೆ (ಹೀಗೆಂದು) ದಿವ್ಯ ಸಂದೇಶವನ್ನು ಕಳಿಸಿದೆವು; ನೀನು ಅವನಿಗೆ ಹಾಲುಣ್ಣಿಸುತ್ತಲಿರು, ಅವನ (ಜೀವದ) ಕುರಿತು ನಿನಗೆ ಭಯವಾದರೆ ಅವನನ್ನು ನದಿಯಲ್ಲಿ ಹಾಕಿಬಿಡು. ನೀನು ಅಂಜಬೇಡ ಮತ್ತು ದುಃಖಿಸಬೇಡ. ನಾವು ಅವನನ್ನು ನಿನ್ನ ಬಳಿಗೇ ಮರಳಿಸುವೆವು ಮತ್ತು ಅವನನ್ನು ನಾವು ದೂತನಾಗಿಸುವೆವು
14.ಒಮ್ಮೆ ನಗರದ ಜನರು ನಿದ್ದೆಯಲ್ಲಿದ್ದಾಗ ಅವರು ನಗರವನ್ನು ಪ್ರವೇಶಿಸಿದರು. ಅಲ್ಲಿ ಅವರು, ಇಬ್ಬರು ಪರಸ್ಪರ ಜಗಳಾಡುತ್ತಿರುವುದನ್ನು ಕಂಡರು. ಅವರಲ್ಲೊಬ್ಬನು ಅವರ ಪಾಳಯದವನಾಗಿದ್ದನು ಮತ್ತು ಇನ್ನೊಬ್ಬನು ಅವರ ಶತ್ರು ಪಾಳಯದವನಾಗಿದ್ದನು. ಅವರ ಪಾಳಯದವನು, ಅವರ ಶತ್ರು ಪಾಳಯದವನ ವಿರುದ್ಧ ಅವರ ನೆರವನ್ನು ಬೇಡಿದನು. ಮೂಸಾ ಆತನಿಗೆ (ಶತ್ರು ಪಾಳಯದವನಿಗೆ) ಹೊಡೆದರು ಮತ್ತು ಅದು ಆತನ ಅಂತ್ಯಕ್ಕೆ ಕಾರಣವಾಯಿತು. ಅವರು (ಮೂಸಾ) ‘‘ಇದು ಶೈತಾನನ ಕೃತ್ಯ. ಅವನು ಖಂಡಿತ ಸ್ಪಷ್ಟವಾಗಿ ದಾರಿಗೆಡಿಸುವ ಶತ್ರುವಾಗಿದ್ದಾನೆ’’ ಎಂದರು
15.ಅವರು ‘‘ನನ್ನೊಡೆಯಾ, ನಾನು ನನ್ನ ಮೇಲೆಯೇ ಅಕ್ರಮ ವೆಸಗಿದ್ದೇನೆ. ನನ್ನನ್ನು ಕ್ಷಮಿಸಿಬಿಡು’’ ಎಂದು ಪ್ರಾರ್ಥಿಸಿದರು. ಅವನು (ಅಲ್ಲಾಹನು) ಅವರನ್ನು ಕ್ಷಮಿಸಿಬಿಟ್ಟನು. ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ
18.ಅವರು, ತಮ್ಮಿಬ್ಬರ ಪಾಲಿಗೂ ಶತ್ರುವಾಗಿದ್ದವನ ಮೇಲೆ ಕೈ ಮಾಡಲು ಹೊರಟಾಗ ಅವನು ಹೇಳಿದನು; ಓ ಮೂಸಾ, ನೀನು ನಿನ್ನೆ ಒಬ್ಬಾತನನ್ನು ಕೊಂದಂತೆ ನನ್ನನ್ನು ಕೊಲ್ಲ ಬಯಸುವೆಯಾ? ಭೂಮಿಯಲ್ಲಿ ದಬ್ಬಾಳಿಕೆ ನಡೆಸುವುದಷ್ಟೇ ನಿನ್ನ ಬಯಕೆಯಾಗಿದೆ. ನೀನು ಸುಧಾರಕನಾಗಲು ಬಯಸುವುದಿಲ್ಲ
19.ಅಷ್ಟರಲ್ಲಿ, ನಗರದ ಗಡಿಭಾಗದಿಂದ ಧಾವಿಸಿಬಂದ ಒಬ್ಬ ವ್ಯಕ್ತಿ ಹೇಳಿದ; ಓ ಮೂಸಾ, ನಾಯಕರು ನಿಮ್ಮನ್ನು ಕೊಲ್ಲುವುದಕ್ಕಾಗಿ ನಿಮ್ಮ ಕುರಿತು ಸಮಾಲೋಚಿಸುತ್ತಿದ್ದಾರೆ. ನೀವು (ಇಲ್ಲಿಂದ) ಹೊರಟು ಹೋಗಿರಿ. ನಾನು ಖಂಡಿತ ನಿಮ್ಮ ಹಿತೈಷಿಯಾಗಿದ್ದೇನೆ
22.ಅವರು ಮದ್‌ಯನ್‌ನಲ್ಲಿ, ನೀರಿರುವ ಸ್ಥಳದಲ್ಲಿ, ಜನರ ಗುಂಪೊಂದು (ಕುರಿಗಳಿಗೆ) ನೀರು ಕುಡಿಸುವುದನ್ನು ಕಂಡರು ಮತ್ತು ಇಬ್ಬರು ಮಹಿಳೆಯರು ದೂರ ನಿಂತಿರುವುದನ್ನು ಕಂಡರು. ಅವರು ಆ ಇಬ್ಬರೊಡನೆ, ನಿಮ್ಮ ಸಮಾಚಾರವೇನು? ಎಂದು ವಿಚಾರಿಸಿದರು. ‘‘ಕುರಿ ಕಾಯುವವರು (ತಮ್ಮ ಕುರಿಗಳಿಗೆ) ನೀರು ಕುಡಿಸಿ ಮುಗಿಸುವ ತನಕ ನಾವು ನೀರು ಕುಡಿಸುವಂತಿಲ್ಲ. ಅತ್ತ, ನಮ್ಮ ತಂದೆ ತುಂಬಾ ವೃದ್ಧರು’’ ಎಂದು ಅವರು ಉತ್ತರಿಸಿದರು
24.ಆಗ ಆ ಮಹಿಳೆಯರಲ್ಲೊಬ್ಬಳು ನಾಚುತ್ತಾ ಅವರ ಬಳಿಗೆ ನಡೆದು ಬಂದಳು. ನೀವು ನಮಗೆ ನೀರನ್ನು ಒದಗಿಸಿದ್ದಕ್ಕಾಗಿ ನಿಮಗೆ ಪುರಸ್ಕಾರ ನೀಡಲು ನನ್ನ ತಂದೆ ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಆಕೆ ಹೇಳಿದಳು. ತರುವಾಯ ಅವರು (ಮೂಸಾ) ಅವರ (ಶುಐಬರ) ಬಳಿಗೆ ಬಂದರು ಮತ್ತು ಸಮಾಚಾರವನ್ನೆಲ್ಲಾ ತಿಳಿಸಿದರು. ಅವರು (ಶುಐಬ್) ಹೇಳಿದರು; ನೀವೇನೂ ಅಂಜಬೇಡಿ. ನೀವೀಗ ಅಕ್ರಮಿ ಜನಾಂಗದಿಂದ ಸುರಕ್ಷಿತರಾಗಿರುವಿರಿ
26.ಅವರು (ಶುಐಬ್) ಹೇಳಿದರು; ನೀವು ಎಂಟು ವರ್ಷ ನನ್ನ ಬಳಿ ಸೇವೆ ಸಲ್ಲಿಸುವುದಾದರೆ ನಾನು ಈ ನನ್ನ ಇಬ್ಬರು ಪುತ್ರಿಯರ ಪೈಕಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಕೊಡುವೆನು. ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಔದಾರ್ಯವಾಗಿರುವುದು. ನಾನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ. ಅಲ್ಲಾಹನು ಇಚ್ಛಿಸಿದರೆ ನೀವು ನನ್ನನ್ನು ಸಜ್ಜನನಾಗಿ ಕಾಣುವಿರಿ
28.ಹೀಗೆ, ಮೂಸಾ ಅವಧಿ ಪೂರ್ತಿಗೊಳಿಸಿ ತಮ್ಮ ಮನೆಯವರೊಂದಿಗೆ ಹೊರಟರು. ಅವರು ತೂರ್ ಬೆಟ್ಟದ ಕಡೆ ಒಂದು ಬೆಂಕಿಯನ್ನು ಕಂಡರು. ನೀವು ಇಲ್ಲೇ ಉಳಿಯಿರಿ. ನಾನು ಬೆಂಕಿಯನ್ನು ಕಂಡಿದ್ದೇನೆ. ನಿಮಗಾಗಿ ಅಲ್ಲಿಂದೇನಾದರೂ ಮಾಹಿತಿಯನ್ನು ತರಲು ಅಥವಾ ನೀವು ಚಳಿಕಾಯಿಸಿಕೊಳ್ಳುವುದಕ್ಕಾಗಿ ಬೆಂಕಿಯ ಕೆಂಡವನ್ನಾದರೂ ತರಲು ನನಗೆ ಸಾಧ್ಯವಾದೀತು – ಎಂದು ಅವರು ತಮ್ಮ ಮನೆಯವರೊಡನೆ ಹೇಳಿದರು
30.ನೀವೀಗ ನಿಮ್ಮ ಊರುಗೋಲನ್ನು ಕೆಳಕ್ಕೆಸೆಯಿರಿ – ಎನ್ನಲಾಯಿತು. ಅದು ಹೆಬ್ಬಾವಿನಂತೆ ಚಲಿಸುವುದನ್ನು ಕಂಡು ಅವರು ಬೆನ್ನು ತಿರುಗಿಸಿ ಮರಳಿ ಹೊರಟರು ಮತ್ತು ಹಿಂದಿರುಗಿಯೂ ನೋಡಲಿಲ್ಲ. (ಅವರೊಡನೆ ಹೇಳಲಾಯಿತು;) ಓ ಮೂಸಾ, ನೀವು ಮುಂದೆ ಬನ್ನಿ ಮತ್ತು ಅಂಜಬೇಡಿ. ನೀವು ಸುರಕ್ಷಿತರಾಗಿರುವಿರಿ
31.ನೀವು ನಿಮ್ಮ ಕೈಯನ್ನು ನಿಮ್ಮ ಬಗಲಿಗೆ ಹಾಕಿರಿ. ಅದು ಸುಲಭವಾಗಿ, ಹೊಳೆಯುತ್ತಾ ಹೊರಬರುವುದು. ಮತ್ತು ನೀವು ಭಯಮುಕ್ತರಾಗಲಿಕ್ಕಾಗಿ, ನಿಮ್ಮ ತೋಳುಗಳನ್ನು ನಿಮ್ಮೆಡೆಗೆ ಎಳೆದುಕೊಳ್ಳಿರಿ. ಇವು, ಫಿರ್‌ಔನ್ ಮತ್ತು ಅವನ ಸರದಾರರಿಗಾಗಿ ನಿಮ್ಮೊಡೆಯನ ಕಡೆಯಿಂದ ನೀಡಲಾಗುತ್ತಿರುವ ಎರಡು ಪುರಾವೆಗಳು. ಅವರು ತೀರಾ ಅವಿಧೇಯರಾಗಿ ಬಿಟ್ಟಿದ್ದಾರೆ
34.ಅವನು (ಅಲ್ಲಾಹ್) ಹೇಳಿದನು; ನಾವು ಈಗಲೇ ನಿಮ್ಮ ಸಹೋದರನ ಮೂಲಕ ನಿಮ್ಮ ಕೈಗಳನ್ನು ಬಲಪಡಿಸುವೆವು ಮತ್ತು ನಿಮ್ಮ ವಿರುದ್ಧ ಪ್ರಾಬಲ್ಯ ಸಾಧಿಸಲು ಅವರಿಗೆ ಸಾಧ್ಯವಾಗದಂತೆ, ನಾವು ನಮ್ಮ ಪುರಾವೆಗಳ ಮೂಲಕ ನಿಮ್ಮಿಬ್ಬರಿಗೂ ವಿಶೇಷ ಶಕ್ತಿಯನ್ನು ನೀಡುವೆವು. ನಿಮ್ಮಿಬ್ಬರಿಗೂ ನಿಮ್ಮ ಅನುಯಾಯಿಗಳಿಗೂ ವಿಜಯ ಪ್ರಾಪ್ತವಾಗುವುದು
37.ಫಿರ್‌ಔನನು ಹೇಳಿದನು; ಸರದಾರರೇ, ನಿಮಗೆ ನನ್ನ ಹೊರತು ಬೇರೊಬ್ಬ ದೇವರಿರುವುದು ನನಗಂತು ತಿಳಿಯದು. ಸದ್ಯ, ಓ ಹಾಮಾನ್, ನೀನು ನನಗಾಗಿ ಆವೆ ಮಣ್ಣನ್ನು ಬೆಂಕಿಯಲ್ಲಿ ಉರಿಸು ಮತ್ತು ನನಗಾಗಿ ಒಂದು ಎತ್ತರದ ಗೋಪುರವನ್ನು ನಿರ್ಮಿಸು. ಆ ಮೂಲಕ ನಾನು ಮೂಸಾನ ದೇವರ ಕಡೆಗೊಮ್ಮೆ ಇಣುಕಿ ನೋಡುತ್ತೇನೆ. ನಾನಂತೂ ಅವನನ್ನು (ಮೂಸಾರನ್ನು) ಸುಳ್ಳುಗಾರನೆಂದೇ ಭಾವಿಸುತ್ತೇನೆ
44.ನಿಜವಾಗಿ ನಾವು ಹಲವು ಸಮುದಾಯಗಳನ್ನು ಸೃಷ್ಟಿಸಿದೆವು. ಕೊನೆಗೆ ಅವರ ಕಾಲಾವಧಿಯು ಮೀರಿಹೋಯಿತು. ಮದ್‌ಯನ್‌ನವರಿಗೆ ನಮ್ಮ ವಚನಗಳನ್ನು ಕೇಳಿಸಲು ನೀವೇನೂ ಅಲ್ಲಿಯ ನಿವಾಸಿಯಾಗಿರಲಿಲ್ಲ. ನಿಜವಾಗಿ ನಾವೇ (ಆ ಕುರಿತು ನಿಮಗೆ) ಸಂದೇಶವನ್ನು ಕಳಿಸಿದ್ದೆವು
45.ನಾವು (ಮೂಸಾರನ್ನು) ಕೂಗಿ ಕರೆದಾಗ ನೀವು ತೂರ್‌ನ ಪಕ್ಕದಲ್ಲೇನೂ ಇರಲಿಲ್ಲ. ನಿಜವಾಗಿ (ಇದು) ನಿಮ್ಮ ಒಡೆಯನ ಅನುಗ್ರಹವಾಗಿದೆ. ನಿಮಗಿಂತ ಮುನ್ನ ಎಚ್ಚರಿಸುವವರು ಬಂದಿಲ್ಲದ ಜನಾಂಗದವರು ಉಪದೇಶ ಸ್ವೀಕರಿಸಬಹುದೆಂದು, ಅವರನ್ನು ಎಚ್ಚರಿಸಲಿಕ್ಕಾಗಿ (ನಿಮ್ಮನ್ನು ನೇಮಿಸಲಾಯಿತು)
46.(ನಾವು ದೂತರನ್ನು ಕಳಿಸದೆ ಇದ್ದಿದ್ದರೆ) ಅವರ ಸ್ವಂತ ಕೈಗಳ ದುಡಿಮೆಯ (ಪಾಪಗಳ) ಫಲವಾಗಿ ಅವರ ಮೇಲೆ ವಿಪತ್ತೇನಾದರೂ ಬಂದಾಗ, ಅವರು; ‘‘ನಮ್ಮಡೆಯಾ, ನೀನು ನಮ್ಮೆಡೆಗೆ ಒಬ್ಬ ದೂತನನ್ನೇಕೆ ಕಳಿಸಲಿಲ್ಲ? (ಕಳಿಸಿದ್ದರೆ) ನಾವು ನಿನ್ನ ವಚನಗಳನ್ನು ಅನುಸರಿಸುತ್ತಿದ್ದೆವು ಮತ್ತು ವಿಶ್ವಾಸಿಗಳಾಗಿ ಬಿಡುತ್ತಿದ್ದೆವು ’’ ಎನ್ನುತ್ತಿದ್ದರು
47.ನಮ್ಮ ಕಡೆಯಿಂದ ಸತ್ಯವು ತಮ್ಮ ಬಳಿಗೆ ಬಂದಾಗ, ಅವರು, ‘‘ಮೂಸಾರಿಗೆ ನೀಡಲಾದುದನ್ನು ನಮಗೇಕೆ ನೀಡಲಾಗಿಲ್ಲ?’’ ಎಂದರು. ಈ ಹಿಂದೆ ಅವರು, ಮೂಸಾರಿಗೆ ನೀಡಲಾದುದನ್ನು ಧಿಕ್ಕರಿಸಿರಲಿಲ್ಲವೇ? ಆಗ ಅವರು, ಇವೆರಡೂ ಪರಸ್ಪರ ಪೂರಕವಾಗಿರುವ ಮಾಟಗಾರಿಕೆಗಳು ಎಂದಿದ್ದರು ಮತ್ತು ನಾವು ಎಲ್ಲವನ್ನೂ ಧಿಕ್ಕರಿಸುತ್ತೇವೆ ಎಂದಿದ್ದರು
49.ಅವರು ನಿಮ್ಮ ಮಾತನ್ನು ಸ್ವೀಕರಿಸದಿದ್ದರೆ, ನಿಮಗೆ ತಿಳಿದಿರಲಿ; ಅವರು ಕೇವಲ ತಮ್ಮ ಸ್ವೇಚ್ಛೆಯನ್ನಷ್ಟ್ಟೇ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯಿಂದ ಯಾವುದೇ ಮಾರ್ಗದರ್ಶನವಿಲ್ಲದೆ, ತನ್ನ ಸ್ವೇಚ್ಛೆಯನ್ನು ಅನುಸರಿಸುವಾತನಿಗಿಂತ ಹೆಚ್ಚು ದಾರಿಗೆಟ್ಟವನು ಯಾರಿರಬಹುದು? ಅಲ್ಲಾಹನು ಅಕ್ರಮಿಗಳಿಗೆ ಖಂಡಿತ ದಾರಿ ತೋರುವುದಿಲ್ಲ
55.(ದೂತರೇ,) ನಿಮ್ಮ ಪ್ರೀತಿ ಪಾತ್ರರನ್ನೆಲ್ಲಾ ಸರಿದಾರಿಗೆ ತರಲು ನಿಮ್ಮಿಂದ ಖಂಡಿತ ಸಾಧ್ಯವಿಲ್ಲ. ನಿಜವಾಗಿ, ಅಲ್ಲಾಹನೇ ತಾನಿಚ್ಛಿಸಿದವರನ್ನು ಸರಿದಾರಿಗೆ ತರುತ್ತಾನೆ. ಸರಿದಾರಿಗೆ ಬರುವವರು ಯಾರು ಎಂಬುದನ್ನು ಅವನೇ ಹೆಚ್ಚು ಬಲ್ಲವನು
56.‘‘ನಾವು ನಿಮ್ಮ ಜೊತೆಗೆ ಸೇರಿ ಸರಿದಾರಿಯನ್ನು ಅನುಸರಿಸಿದರೆ, ನಮ್ಮನ್ನು ನಮ್ಮ ನಾಡಿನಿಂದ ಹೊರ ಹಾಕಲಾದೀತು’’ಎಂದು ಅವರು ಹೇಳುತ್ತಾರೆ. ನಾವೇನು ಅವರನ್ನು, ಪವಿತ್ರವಾದ ಸುರಕ್ಷಿತ ಸ್ಥಳದಲ್ಲಿ ನೆಲೆಸಲಿಲ್ಲವೇ? ಅದು ನಮ್ಮ ಕಡೆಯಿಂದ, ಎಲ್ಲ ಫಲಗಳೂ ಆಹಾರ ರೂಪದಲ್ಲಿ ಬಂದು ತಲುಪುವ ಸ್ಥಳ. ಆದರೆ ಅವರಲ್ಲಿ ಹೆಚ್ಚಿನವರಿಗೆ ಏನೂ ತಿಳಿದಿಲ್ಲ
57.ತಮ್ಮ ಸಂಪನ್ನತೆಯ ಬಗ್ಗೆ ಅಹಂಕಾರ ಪಡುತ್ತಿದ್ದ ಅದೆಷ್ಟು ನಾಡುಗಳನ್ನು ನಾವು ನಾಶಪಡಿಸಿದ್ದೇವೆ! ಅದೋ ಅವರು ನೆಲೆಸಿದ್ದ ಭವನಗಳು! ಅವರ ಬಳಿಕ (ಅವುಗಳಲ್ಲಿ) ಕೇವಲ ಕೆಲವರ ಹೊರತು ಬೇರೆ ಯಾರೂ ನೆಲೆಸಲಿಲ್ಲ. ನಿಜವಾಗಿ ನಾವೇ (ಅವೆಲ್ಲವುಗಳ) ಉತ್ತರಾಧಿಕಾರಿಗಳಾದೆವು
58.ನಿಮ್ಮ ಒಡೆಯನು ಯಾವುದೇ ನಾಡಿನ ಕೇಂದ್ರ ಸ್ಥಾನಕ್ಕೆ, ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸುವ ಒಬ್ಬ ದೂತನನ್ನು ಕಳಿಸುವ ತನಕ ಆ ನಾಡನ್ನು ನಾಶಪಡಿಸುವುದಿಲ್ಲ. ಮತ್ತು ನಾವು, ಯಾವುದೇ ನಾಡಿನ ಜನರು ಅಕ್ರಮಿಗಳಾಗದೆ ಆ ನಾಡನ್ನು ನಾಶಪಡಿಸುವುದಿಲ್ಲ
59.ನಿಮಗೆ ನೀಡಲಾಗಿರುವ ಪ್ರತಿಯೊಂದು ವಸ್ತುವೂ ಕೇವಲ ಇಹಲೋಕದ ಬದುಕಿನ ಸೊತ್ತಾಗಿದೆ ಮತ್ತು ಇಲ್ಲಿಗಷ್ಟೇ ಭೂಷಣವಾಗಿದೆ. ಅಲ್ಲಾಹನ ಬಳಿ ಏನಿದೆಯೋ ಅದು ಉತ್ತಮವಾಗಿದೆ ಹಾಗೂ ಅದು ಹೆಚ್ಚು ಕಾಲ ಉಳಿಯುತ್ತದೆ. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ
62.ಅದಾಗಲೇ ತೀರ್ಪು ವಿಧಿಸಲ್ಪಟ್ಟವರು ಹೇಳುವರು; ನಮ್ಮೊಡೆಯಾ, ಅವರೇ ನಮ್ಮನ್ನು ದಾರಿಗೆಡಿಸಿದವರು. ನಾವು ಸ್ವತಃ ದಾರಿಗೆಟ್ಟಂತೆ ಅವರನ್ನು ದಾರಿಗೆಡಿಸಿದೆವು. ಅವರು ನಮ್ಮನ್ನು ಪೂಜಿಸುತ್ತಿರಲಿಲ್ಲ ಎಂದು ನಿನ್ನ ಮುಂದೆ ನಾವು ದೋಷಮುಕ್ತಿ ಪ್ರಕಟಿಸುತ್ತಿದ್ದೇವೆ
63.ನಿಮ್ಮ ಪಾಲುದಾರರನ್ನು (ಉಪದೇವತೆಗಳನ್ನು) ಕರೆಯಿರಿ ಎಂದು ಅವರೊಡನೆ ಹೇಳಲಾಗುವುದು. ಅವರು ಅವುಗಳನ್ನು ಕರೆಯುವರು. ಆದರೆ ಅವುಗಳು ಅವರಿಗೆ ಯಾವುದೇ ಉತ್ತರ ನೀಡಲಾರವು. ಕೊನೆಗೆ ಅವರು ಶಿಕ್ಷೆಯನ್ನು ಕಾಣುವರು. ಅವರು ಸರಿದಾರಿಯನ್ನು ಅನುಸರಿಸಿದ್ದರೆ ಎಷ್ಟು ಚೆನ್ನಾಗಿತ್ತು
70.ಹೇಳಿರಿ; ನೀವು ಕಂಡಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಮೇಲೆ ಲೋಕಾಂತ್ಯದವರೆಗೆ, ಶಾಶ್ವತವಾಗಿ ರಾತ್ರಿಯನ್ನೇ ಹೇರಿ ಬಿಟ್ಟರೆ, ಅಲ್ಲಾಹನ ಹೊರತು ಬೇರಾವ ದೇವರಿದ್ದಾರೆ, ನಿಮಗೆ ಬೆಳಕನ್ನು ತಂದು ಕೊಡಬಲ್ಲವರು? ನೀವೇನು ಆಲಿಸುವುದಿಲ್ಲವೇ
71.ಹೇಳಿರಿ; ನೀವು ಕಂಡಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಮೇಲೆ ಲೋಕಾಂತ್ಯದವರೆಗೆ ಶಾಶ್ವತವಾಗಿ ಹಗಲನ್ನೇ ಹೇರಿಬಿಟ್ಟರೆ, ಅಲ್ಲಾಹನ ಹೊರತು ಬೇರಾವ ದೇವರಿದ್ದಾರೆ, ನೀವು ವಿಶ್ರಾಂತಿ ಪಡೆಯುವಂತಾಗಲು ನಿಮಗೆ ರಾತ್ರಿಯನ್ನು ತಂದು ಕೊಡಬಲ್ಲವರು? ನೀವೇನು ನೋಡುವುದಿಲ್ಲವೇ
74.ಮತ್ತು ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಮುಂದೆ ತರುವೆವು ಹಾಗೂ ‘‘ನಿಮ್ಮ ಪುರಾವೆಯನ್ನು ಮುಂದಿಡಿರಿ’’ ಎನ್ನುವೆವು. ಆಗ ಅಲ್ಲಾಹನ ಮಾತು ಮಾತ್ರ ಸತ್ಯವೆಂಬುದನ್ನು ಅವರು ಮನಗಾಣುವರು ಮತ್ತು ಅವರು ರಚಿಸಿಕೊಂಡಿದ್ದ ಎಲ್ಲವೂ (ಎಲ್ಲ ಮಿಥ್ಯಗಳೂ) ಅವರಿಂದ ಮರೆಯಾಗಿ ಬಿಡುವವು
75.ಕಾರೂನನು ಮೂಸಾರ ಜನಾಂಗದವನೇ ಆಗಿದ್ದನು ಮತ್ತು ಅವನು ಅವರ ವಿರುದ್ಧ ವಿದ್ರೋಹಿಯಾದನು. ನಾವು ಅವನಿಗೆ ಅನೇಕ ಖಜಾನೆಗಳನ್ನು ನೀಡಿದ್ದೆವು. ಎಷ್ಟೆಂದರೆ, ಅವುಗಳ ಚಾವಿಗಳು ಒಂದು ಶಕ್ತಿಶಾಲಿ ತಂಡದ ಪಾಲಿಗೂ ಭಾರವೆನಿಸುತ್ತಿದ್ದವು. ಅವನ ಜನಾಂಗವು ಅವನೊಡನೆ ಹೇಳಿತು; ನೀನು ದೊಡ್ಡಸ್ತಿಕೆ ಮೆರೆಯಬೇಡ. ದೊಡ್ಡಸ್ತಿಕೆ ಮೆರೆಯುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ
76.ಅಲ್ಲಾಹನು ನಿನಗೆ ಏನೆಲ್ಲವನ್ನು ನೀಡಿರುವನೋ ಆ ಮೂಲಕ ನೀನು ಪರಲೋಕದ ನೆಲೆಯನ್ನು ಅರಸು ಮತ್ತು (ಅದೇವೇಳೆ) ನೀನು ಇಹಲೋಕದಲ್ಲಿನ ನಿನ್ನ ಪಾಲನ್ನು ಮರೆಯದಿರು ಮತ್ತು ಅಲ್ಲಾಹನು ನಿನಗೆ ಹಿತವನ್ನು ಮಾಡಿರುವಂತೆ ನೀನು (ಜನರಿಗೆ) ಹಿತವನ್ನು ಮಾಡು. ನೀನು ಭೂಮಿಯಲ್ಲಿ ಅಶಾಂತಿಯನ್ನು ಹರಡದಿರು. ಅಶಾಂತಿ ಹರಡುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ
77.ಆಗ ಅವನು ಹೇಳಿದನು; ‘‘ಇದನ್ನೆಲ್ಲಾ ನನ್ನಲ್ಲಿರುವ ಒಂದು (ವಿಶೇಷ) ಜ್ಞಾನದ ಕಾರಣ ನನಗೆ ನೀಡಲಾಗಿದೆ.’’ ಅಲ್ಲಾಹನು ಅವನಿಗಿಂತ ಮುಂಚೆ ಅವನಿಗಿಂತ ಹೆಚ್ಚು ಶಕ್ತರಾಗಿದ್ದ ಮತ್ತು ಹೆಚ್ಚು ಜನಬಲಹೊಂದಿದ್ದ ಗುಂಪುಗಳನ್ನು ನಾಶಪಡಿಸಿದ್ದಾನೆ ಎಂಬುದು ಅವನಿಗೆ ತಿಳಿಯದೇ? (ಹಾಗೆ ನಾಶಪಡಿಸುವಾಗ) ಅಪರಾಧಿಗಳೊಡನೆ, ಅವರ ಪಾಪಗಳ ಕುರಿತು ಪ್ರಶ್ನಿಸಲಾಗುವುದಿಲ್ಲ.’’
78.ಒಮ್ಮೆ ಅವನು (ಕಾರೂನ್) ತನ್ನ ವೈಭವದೊಂದಿಗೆ ತನ್ನ ಜನಾಂಗದವರ ಮುಂದೆ ಹೊರಟನು. ಆಗ, ಕೇವಲ ಈ ಲೋಕದ ಬದುಕನ್ನು ಬಯಸಿದ್ದವರು ‘‘ಕಾರೂನನಿಗೆ ನೀಡಲಾಗಿರುವುದೆಲ್ಲವೂ ನಮ್ಮ ಬಳಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು! ಅವನು ಖಂಡಿತ ಮಹಾ ಭಾಗ್ಯವಂತ!’’ ಎನ್ನತೊಡಗಿದರು
79.ಆದರೆ ಜ್ಞಾನವಂತರು ಹೇಳಿದರು; ‘‘ನಿಮ್ಮ ಸ್ಥಿತಿಯು ಶೋಚನೀಯವಾಗಿದೆ. ಸತ್ಯವನ್ನು ನಂಬಿದ ಹಾಗೂ ಸತ್ಕರ್ಮ ಮಾಡಿದವನ ಪಾಲಿಗೆ, ಅಲ್ಲಾಹನು ನೀಡುವ ಪ್ರತಿಫಲವೇ (ಇದೆಲ್ಲಕ್ಕಿಂತ) ಶ್ರೇಷ್ಠವಾಗಿದೆ ಮತ್ತು ಅದು ಸಹನಶೀಲರಿಗೆ ಮಾತ್ರ ಸಿಗುತ್ತದೆ.’’
80.ಕೊನೆಗೆ ನಾವು ಆತ (ಕಾರೂನ್)ನನ್ನು ಮತ್ತು ಅವನ ನಿವಾಸವನ್ನು ಭೂಮಿಯಲ್ಲಿ ಅದುಮಿ ಬಿಟ್ಟೆವು. ಆಗ ಅಲ್ಲಾಹನ ಹೊರತು ಬೇರೆ ಯಾವ ಪಡೆಯೂ ಅವನ ನೆರವಿಗೆ ಲಭ್ಯವಿರಲಿಲ್ಲ ಮತ್ತ್ತು ತನಗೆ ತಾನೇ ನೆರವಾಗಲಿಕ್ಕೂ ಅವನಿಗೆ ಸಾಧ್ಯವಾಗಲಿಲ್ಲ
81.ನಿನ್ನೆಯವರೆಗೂ ಅವನ ಸ್ಥಾನಮಾನಕ್ಕಾಗಿ ಆಶೆಪಡುತ್ತಿದ್ದವರು ಬೆಳಗಾದಾಗ ಹೇಳ ತೊಡಗಿದರು; ಅಯ್ಯೋ ಅಲ್ಲಾಹನು ಸಂಪತ್ತನ್ನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಪಾಲಿಗೆ ವಿಶಾಲಗೊಳಿಸುತ್ತಾನೆ ಮತ್ತು ಸೀಮಿತಗೊಳಿಸಿಬಿಡುತ್ತಾನೆ. ನಮ್ಮ ಮೇಲೆ ಅಲ್ಲಾಹನು ಕೃಪೆ ತೋರದೆ ಇದ್ದಿದ್ದರೆ, ಅವನು ನಮ್ಮನ್ನೂ (ಭೂಮಿಯೊಳಗೆ) ಅದುಮಿ ಬಿಡುತ್ತಿದ್ದನು. ಎಷ್ಟೊಂದು ಸತ್ಯ! ಕೃತಘ್ನರು ಎಂದೂ ವಿಜಯಿಗಳಾಗುವುದಿಲ್ಲ
84.(ದೂತರೇ,) ಕುರ್‌ಆನನ್ನು ನಿಮಗೆ ಕಡ್ಡಾಯಗೊಳಿಸಿದವನು ಖಂಡಿತವಾಗಿಯೂ ನಿಮ್ಮನ್ನು ಸೂಕ್ತ ನೆಲೆಗೆ ಮರಳಿಸುವನು. ಹೇಳಿರಿ; ಮಾರ್ಗದರ್ಶನವನ್ನು ತಂದಿರುವವನು ಯಾರು ಮತ್ತು ಯಾರು ಸ್ಪಷ್ಟವಾಗಿ ದಾರಿತಪ್ಪಿರುವವನೆಂಬುದನ್ನು ನನ್ನ ಒಡೆಯನು ಚೆನ್ನಾಗಿ ಬಲ್ಲನು