عبدالسلام پوتیگه · ಕನ್ನಡ

1.ನಾವು ಇಸ್ರಾಈಲರ ಸಂತತಿಗಳಿಗೆ ಗ್ರಂಥದಲ್ಲೇ (ಹೀಗೆಂದು) ತಿಳಿಸಿಬಿಟ್ಟಿದ್ದೆವು: ನೀವು ಭೂಮಿಯಲ್ಲಿ ಎರಡು ಬಾರಿ ಅಶಾಂತಿಯನ್ನು ಹಬ್ಬುವಿರಿ ಮತ್ತು ಭಾರೀ ಪ್ರಕ್ಷೋಭೆಯನ್ನುಂಟು ಮಾಡುವಿರಿ
2.ಅವೆರಡರ ಪೈಕಿ ಮೊದಲ ಅವಧಿ ಬಂದಾಗ, ತುಂಬಾ ಬಲಿಷ್ಠ ಹೋರಾಟಗಾರ ರಾಗಿರುವ ನಮ್ಮ ದಾಸರನ್ನು ನಾವು ನಿಮ್ಮ ಮೇಲೆ ಹೇರಿ ಬಿಡುವೆವು ಮತ್ತು ಅವರು ನಾಡುಗಳಿಗೆ ನುಗ್ಗಿ ವ್ಯಾಪಕ ವಿನಾಶವನ್ನು ಮೆರೆಯುವರು – ಈ ವಾಗ್ದಾನವು ಖಂಡಿತ ಈಡೇರುವುದು
4.ನೀವು ಒಳಿತನ್ನು ಮಾಡಿದರೆ, ನಿಮಗಾಗಿಯೇ ಮಾಡುವಿರಿ ಮತ್ತು ಕೆಡುಕನ್ನು ಮಾಡಿದರೂ ನಿಮಗಾಗಿಯೇ ಮಾಡುವಿರಿ. ಮುಂದೆ, ಆ ಎರಡನೆಯ ಅವಧಿಯು ಬಂದು ಬಿಟ್ಟಾಗ (ಮತ್ತೆ ಕೆಲವರನ್ನು ನಾವು ನಿಮ್ಮ ಮೇಲೆ ಹೇರಿ ಬಿಡುವೆವು) – ನಿಮ್ಮ ಮುಖಗಳನ್ನು ವಿಕೃತಗೊಳಿಸಲಿಕ್ಕಾಗಿ, ಮೊದಲ ಬಾರಿ ನುಗ್ಗಿದಂತೆ (ಅಲ್‌ಅಕ್ಸಾ) ಮಸೀದಿಯೊಳಗೆ ನುಗ್ಗಲಿಕ್ಕಾಗಿ ಮತ್ತು ತಮ್ಮ ನಿಯಂತ್ರಣಕ್ಕೆ ಸಿಗುವ ಎಲ್ಲವನ್ನೂ ನಾಶಮಾಡಲಿಕ್ಕಾಗಿ
9.ನಾವು ರಾತ್ರಿ ಹಾಗೂ ಹಗಲನ್ನು ಎರಡು ಪುರಾವೆಗಳಾಗಿಸಿದ್ದೇವೆ ಮತ್ತು ನೀವು ನಿಮ್ಮ ಒಡೆಯನ ಅನುಗ್ರಹವನ್ನು ಅರಸಬೇಕೆಂದು ಹಾಗೂ ವರ್ಷಗಳ ಸಂಖ್ಯೆ ಮತ್ತು (ಇತರ) ಪ್ರಮಾಣಗಳನ್ನು ತಿಳಿಯಬೇಕೆಂದು, ನಾವು ರಾತ್ರಿಯ ಪುರಾವೆಯನ್ನು ಮಂದಗೊಳಿಸಿ, ಹಗಲಿನ ಪುರಾವೆಯನ್ನು ಉಜ್ವಲವಾಗಿಸಿದ್ದೇವೆ. ಮತ್ತು ನಾವು ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದ್ದೇವೆ
12.ಸನ್ಮಾರ್ಗದಲ್ಲಿ ನಡೆಯುವಾತನು ಸ್ವತಃ ತನ್ನ ಲಾಭಕ್ಕಾಗಿಯಷ್ಟೇ ಸನ್ಮಾರ್ಗದಲ್ಲಿ ನಡೆಯುತ್ತಾನೆ. ಇನ್ನು ದಾರಿಗೆಟ್ಟವನ ದಾರಿಗೇಡಿತನದ ದುಷ್ಪರಿಣಾಮ ಕೂಡಾ ಅವನ ಮೇಲೆಯೇ ಇರುವುದು. (ಪುನರುತ್ಥಾನ ದಿನ) ಹೊರೆ ಹೊರುವ ಯಾವೊಬ್ಬನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. ನಾವಂತು ದೂತರನ್ನು ಕಳಿಸುವ ತನಕ ಯಾರನ್ನೂ ಶಿಕ್ಷಿಸುವವರಲ್ಲ
13.ನಾವು ಒಂದು ನಾಡನ್ನು ನಾಶಗೊಳಿಸ ಬಯಸಿದಾಗ ಅದರಲ್ಲಿನ ಸ್ಥಿತಿವಂತರಿಗೆ (ನೀವಿಚ್ಛಿಸಿದ್ದನ್ನು ಮಾಡಿರಿ ಎಂದು) ಆದೇಶಿಸಿ ಬಿಡುತ್ತೇವೆ ಮತ್ತು ಅವರು ಅಲ್ಲಿ ಅವಿಧೇಯತೆಯನ್ನು ಮೆರೆಯಲಾರಂಭಿಸುತ್ತಾರೆ. ಆಗ ಅವರ ಮೇಲೆ ನಮ್ಮ ಶಿಕ್ಷೆಯು ಕಡ್ಡಾಯವಾಗಿ ಬಿಡುತ್ತದೆ ಮತ್ತು ನಾವು ಅವರನ್ನು ಸಂಪೂರ್ಣ ನಿರ್ನಾಮಗೊಳಿಸಿ ಬಿಡುತ್ತೇವೆ
15.ಆತುರವಾಗಿ ಸಿಗುವುದನ್ನು (ಇಹದ ಸುಖವನ್ನು) ಬಯಸುವವರ ಪೈಕಿ, ನಾವಿಚ್ಛಿಸಿದಾತನಿಗೆ ನಾವು , ನಾವಿಚ್ಛಿಸುವಷ್ಟನ್ನು ಆತುರವಾಗಿಯೇ (ಇಹದಲ್ಲೇ) ಕೊಟ್ಟು ಬಿಡುತ್ತೇವೆ. ಆದರೆ ಮುಂದೆ ನಾವು ಆತನಿಗೆ ನರಕವನ್ನು ವಿಧಿಸಿ ಬಿಡುತ್ತೇವೆ. ನಿಂದ್ಯನಾಗಿಯೂ ಅಪಮಾನಿತನಾಗಿಯೂ ಅವನು ಅದರೊಳಗೆ ಸೇರುವನು
20.ನಿಮಗೆ ನಿಮ್ಮ ಒಡೆಯನು (ಹೀಗೆಂದು) ವಿಧಿಸಿರುತ್ತಾನೆ; ನೀವು ಅವನೊಬ್ಬನ ಹೊರತು ಬೇರಾರನ್ನೂ ಪೂಜಿಸಬಾರದು ಮತ್ತು ತಂದೆ ತಾಯಿಯ ಜೊತೆ ಸೌಜನ್ಯಶೀಲರಾಗಿರಬೇಕು. ಒಂದು ವೇಳೆ ಅವರಲೊಬ್ಬರು ಅಥವಾ ಅವರಿಬ್ಬರೂ ನಿಮ್ಮ ಮುಂದೆ ಮುದಿ ವಯಸ್ಸನ್ನು ತಲುಪಿದರೆ, ಅವರೆದುರು ಚಕಾರ ವೆತ್ತಬೇಡಿ ಮತ್ತು ಅವರನ್ನು ಗದರಿಸಬೇಡಿ. ಅವರ ಜೊತೆ ಗೌರವದೊಂದಿಗೆ ಮಾತನಾಡಿರಿ
27.ಖಂಡಿತವಾಗಿಯೂ ನಿಮ್ಮ ಒಡೆಯನು ತಾನಿಚ್ಛಿಸಿದವರ ಪಾಲಿಗೆ ಸಂಪತ್ತನ್ನು ಧಾರಾಳಗೊಳಿಸಿ ಬಿಡುತ್ತಾನೆ. ಮತ್ತು (ತಾನಿಚ್ಛಿಸಿದವರ ಪಾಲಿಗೆ ಅದನ್ನು) ಸೀಮಿತ ಗೊಳಿಸುತ್ತಾನೆ. ಖಂಡಿತವಾಗಿಯೂ ಅವನು ತನ್ನ ದಾಸರ ಕುರಿತು ಅರಿವು ಉಳ್ಳವನು ಹಾಗೂ ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ
30.ಅಲ್ಲಾಹನು ನಿಷಿದ್ಧಗೊಳಿಸಿರುವ (ಕೊಲ್ಲಬಾರದೆಂದಿರುವ) ಯಾವುದೇ ಜೀವವನ್ನು ನೀವು ಅಕ್ರಮವಾಗಿ ಕೊಲ್ಲಬೇಡಿ. ಮತ್ತು ನಾವು, ಅನ್ಯಾಯವಾಗಿ ಕೊಲೆಯಾದವನ ಉತ್ತರಾಧಿಕಾರಿಗೆ (ಪ್ರತೀಕಾರದ) ಅಧಿಕಾರವನ್ನು ನೀಡಿದ್ದೇವೆ. ಆದರೆ ಅವನು ಕೊಲೆಯ ವಿಷಯದಲ್ಲಿ ಮಿತಿಮೀರಬಾರದು. ಅವನು ಖಂಡಿತ ನೆರವಿಗೆ ಅರ್ಹನಾಗಿದ್ದಾನೆ
36.ಇದು, ನಿಮ್ಮ ಒಡೆಯನು ಯುಕ್ತಿಯಿಂದ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ ಕಳುಹಿಸಿದ ಸಂದೇಶವಾಗಿದೆ. (ಮಾನವನೇ,) ನೀನೆಂದೂ ಅಲ್ಲಾಹನ ಜೊತೆ ಬೇರೆ ಯಾರನ್ನಾದರೂ, ಪುಜಾರ್ಹನೆಂದು ಪರಿಗಣಿಸಬೇಡ. ಹಾಗೆ ಮಾಡಿದರೆ, ನಿನ್ನನ್ನು ಅಪಮಾನಿತನಾಗಿಸಿ ಹಾಗೂ ತಿರಸ್ಕೃತನಾಗಿಸಿ ನರಕಕ್ಕೆ ಎಸೆದು ಬಿಡಲಾಗುವುದು
41.ಏಳು ಆಕಾಶಗಳು ಮತ್ತು ಭೂಮಿ ಹಾಗೂ ಅವುಗಳಲ್ಲಿ ಇರುವ ಎಲ್ಲವೂ ಅವನ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಿವೆ. ನಿಜವಾಗಿ, ಅವನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸದ ಯಾವ ವಸ್ತುವೂ ಇಲ್ಲ. ಆದರೆ ಅವುಗಳು ಮಾಡುವ ಪಾವಿತ್ರಜಪವು ನಿಮಗೆ ಅರ್ಥವಾಗುವುದಿಲ್ಲ. ಖಂಡಿತವಾಗಿಯೂ ಅವನು ಸಂಯಮಿ ಹಾಗೂ ಕ್ಷಮಾಶೀಲನು
43.ಮತ್ತು ಅವರಿಗೆ ಇದು ಅರ್ಥವಾಗದಂತೆ ನಾವು ಅವರ ಮನಸ್ಸುಗಳ ಮೇಲೆ ತೆರೆಯನ್ನು ಎಳೆಯುತ್ತೇವೆ ಮತ್ತು ಅವರ ಕಿವಿಗಳಲ್ಲಿ ಕಿವುಡುತನವಿದೆ. ನೀವು ಕುರ್‌ಆನ್‌ನಲ್ಲಿ, ನಿಮ್ಮ ಒಡೆಯನ ಕುರಿತು ಅವನು ಏಕಮಾತ್ರನೆಂದು ಪ್ರಸ್ತಾಪಿಸಿದೊಡನೆ ಅವರು ದ್ವೇಷದಿಂದ ಮುಖ ತಿರುಗಿಸಿ ಓಡಲಾರಂಭಿಸುತ್ತಾರೆ
44.ಅವರು ನಿಮ್ಮ ಕಡೆಗೆ ಕಿವಿಗೊಟ್ಟು ಕೇಳುತ್ತಿರುವಾಗ, ಅವರು (ಆ ರೀತಿ) ಕೇಳುವುದೇಕೆಂಬುದನ್ನು ಮತ್ತು ಅವರು ಗುಟ್ಟಾಗಿ ಸಮಾಲೋಚಿಸಿದ ಸಂದರ್ಭವನ್ನು ನಾವು ಚೆನ್ನಾಗಿ ಬಲ್ಲೆವು. ‘‘ನೀವು ಮಾಟಕ್ಕೆ ತುತ್ತಾದ ಒಬ್ಬ ವ್ಯಕ್ತಿಯನ್ನು ಅನುಸರಿಸುತ್ತಿದ್ದೀರಿ’’ ಎಂದು ಅಕ್ರಮಿಗಳು ಹೇಳುತ್ತಾರೆ
48.ಅಥವಾ ನೀವು, ಅವುಗಳಿಗಿಂತಲೂ ದೊಡ್ಡದೆಂದು ನಿಮ್ಮ ಮನಸ್ಸಿನಲ್ಲಿರುವ ಬೇರೇನಾದರೂ ಆಗಿಬಿಟ್ಟ ಬಳಿಕವೂ (ನಿಮ್ಮನ್ನು ಜೀವಂತಗೊಳಿಸಲಾಗುವುದು). ‘‘(ಆ ರೀತಿ) ನಮ್ಮನ್ನು ಮತ್ತೆ ಜೀವಂತಗೊಳಿಸುವವರು ಯಾರು?’’ ಎಂದು ಅವರು ಕೇಳುವರು; ಹೇಳಿರಿ; ನಿಮ್ಮನ್ನು ಮೊದಲ ಬಾರಿ ರೂಪಿಸಿದವನು (ಅವನೇ ಆ ಕೆಲಸಮಾಡುವನು). ಮತ್ತೆ ಅವರು ತಮ್ಮ ತಲೆಗಳನ್ನು ನಿಮ್ಮೆಡೆಗೆ ವಾಲಿಸುತ್ತಾ, ‘‘ಅದು (ಆ ದಿನ) ಬರುವುದು ಯಾವಾಗ?’’ ಎಂದು ಕೇಳುವರು. ‘‘ಅದು ತುಂಬಾ ಹತ್ತಿರವೇ ಇರಲೂಬಹುದು’’ ಎಂದು ಹೇಳಿರಿ
52.ನಿಮ್ಮ ಒಡೆಯನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರನ್ನೂ ಚೆನ್ನಾಗಿ ಬಲ್ಲನು. ಮತ್ತು ನಾವು, ಕೆಲವು ದೂತರಿಗೆ ಮತ್ತೆ ಕೆಲವರಿಗಿಂತ ಹಿರಿಮೆಯನ್ನು ನೀಡಿರುವೆವು ಮತ್ತು ದಾವೂದ್‌ರಿಗೆ ನಾವು ಝಬೂರ್ (ಗ್ರಂಥ)ವನ್ನು ನೀಡಿದ್ದೆವು
54.ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ, ನಿಜವಾಗಿ ಅವರೆಲ್ಲಾ ತಮ್ಮ ಒಡೆಯನ ಮೆಚ್ಚುಗೆಗಳಿಸಲು ಮತ್ತು ಅವನಿಗೆ ಇತರರಿಗಿಂತ ಹೆಚ್ಚು ನಿಕಟರಾಗಲು ದಾರಿ ಹುಡುಕುತ್ತಿರುತ್ತಾರೆ, ಅವನ ಅನುಗ್ರಹದ ನಿರೀಕ್ಷೆಯಲ್ಲಿರುತ್ತಾರೆ ಮತ್ತು ಅವನ ಶಿಕ್ಷೆಗೆ ಅಂಜುತ್ತಿರುತ್ತಾರೆ. ನಿಮ್ಮೊಡೆಯನ ಶಿಕ್ಷೆಯು ನಿಜಕ್ಕೂ ಅಂಜಲೇ ಬೇಕಾದ ಶಿಕ್ಷೆಯಾಗಿದೆ
56.ನಾವು (ಹೊಸ) ಪುರಾವೆಗಳನ್ನು ಕಳಿಸದೆ ಇರುವುದಕ್ಕೆ, ಹಿಂದಿನವರು ಅವುಗಳನ್ನು ಧಿಕ್ಕರಿಸಿದ್ದೇ ಕಾರಣವಾಗಿದೆ. ಮತ್ತು ನಾವು ಸಮೂದ್ ಜನಾಂಗದವರಿಗೆ, ಎದ್ದು ಕಾಣುವ (ಪುರಾವೆಯಾಗಿ) ಒಂದು ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರ ಮೇಲೆ ಅಕ್ರಮ ವೆಸಗಿದರು. ನಿಜವಾಗಿ ನಾವು ಪುರಾವೆಗಳನ್ನು ಕಳಿಸುವುದು ಎಚ್ಚರಿಸುವುದಕ್ಕಾಗಿ ಮಾತ್ರ
57.ನಿಮ್ಮ ಒಡೆಯನು ಜನರನ್ನೆಲ್ಲಾ ಸುತ್ತುವರಿದಿರುವನು ಎಂದು ನಾವು ನಿಮಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ನಾವು ನಿಮಗೆ ತೋರಿಸಿದ ಆ ದೃಶ್ಯಗಳನ್ನು ಮತ್ತು ಕುರ್‌ಆನ್‌ನಲ್ಲಿ ಶಪಿಸಲಾಗಿರುವ ಆ ಮರವನ್ನು ನಾವು ಜನರ ಪಾಲಿಗೆ ಪರೀಕ್ಷೆಯಾಗಿಸಿದ್ದೇವೆ. ನಾವು ಅವರನ್ನು ಎಚ್ಚರಿಸುತ್ತಿದ್ದೇವೆ. ಆದರೆ ಅದು ಅವರ ಭಾರೀ ವಿದ್ರೋಹವನ್ನಷ್ಟೇ ಹೆಚ್ಚಿಸುತ್ತಿದೆ
59.ಅವನು ಹೇಳಿದನು; ನೀನು ನನಗಿಂತ ಹೆಚ್ಚಿನ ಮೇಲ್ಮೆಯನ್ನು ನೀಡಿರುವ ಆತನನ್ನು ನೋಡು. ನೀನು ಪುನರುತ್ಥಾನ ದಿನದ ತನಕ ನನಗೆ ಕಾಲಾವಕಾಶ ನೀಡಿದರೆ, ಕೇವಲ ಕೆಲವರ ಹೊರತು ಅವನ ಸಂತತಿಯವರನ್ನೆಲ್ಲಾ ನಾನು ನನ್ನ ವಶಕ್ಕೆ ತೆಗೆದುಕೊಳ್ಳುವೆನು
61.ಅವರ ಪೈಕಿ ನಿನಗೆ ಸಾಧ್ಯವಿರುವವನನ್ನು ನೀನು ನಿನ್ನ ಧ್ವನಿಯ ಮೂಲಕ ಪುಸಲಾಯಿಸು ಮತ್ತು ನಿನ್ನ (ಪಡೆಯ) ಸವಾರರನ್ನೂ ಕಾಲಾಳುಗಳನ್ನ್ನೂ ಅವರ ಮೇಲೆ ಹೇರಿ ಬಿಡು ಮತ್ತು ನೀನು ಸಂಪತ್ತು ಹಾಗೂ ಸಂತಾನಗಳಲ್ಲಿ ಅವರ ಪಾಲುದಾರನಾಗು ಮತ್ತು ನೀನು ಅವರಿಗೆ ವಾಗ್ದಾನವನ್ನು ನೀಡು. ಶೈತಾನನು ಅವರಿಗೆ ನೀಡುವ ವಾಗ್ದಾನವು ಕೇವಲ ವಂಚನೆಯಾಗಿರುತ್ತದೆ
64.ಸಮುದ್ರದಲ್ಲಿ ನಿಮಗೇನಾದರೂ ಆಪತ್ತು ಎದುರಾದಾಗ, ಅವನೊಬ್ಬನ ಹೊರತು ನೀವು ಕರೆದು ಪ್ರಾರ್ಥಿಸುವ ಇತರೆಲ್ಲರೂ ಕಳೆದು ಹೋಗುವರು. ಕೊನೆಗೆ ಅವನು ನಿಮ್ಮನ್ನು ರಕ್ಷಿಸಿ ದಡದೆಡೆಗೆ ತಲುಪಿಸಿದಾಗ, ನೀವು ತಿರುಗಿ ಬಿಡುತ್ತೀರಿ. ಮಾನವನು ಖಂಡಿತ ಕೃತಘ್ನನು
65.ಅವನು (ಅಲ್ಲಾಹನು), ದಡದ ಭಾಗದಲ್ಲೇ ನಿಮ್ಮನ್ನು (ಭೂಮಿಯೊಳಗೆ) ಹೂತು ಬಿಡುವ ಅಥವಾ ಅವನು ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸುವ ಸಾಧ್ಯತೆಯ ಕುರಿತು ನೀವೇನು ನಿಶ್ಚಿಂತರಾಗಿರುವಿರಾ? (ಹಾಗೇನಾದರೂ ಆದರೆ) ನೀವು ನಿಮ್ಮ ಪಾಲಿಗೆ ಯಾವ ಕಾರ್ಯಸಾಧಕನನ್ನೂ ಕಾಣಲಾರಿರಿ
66.ಅಥವಾ, ಅವನು ನಿಮ್ಮನ್ನು ಮತ್ತೊಮ್ಮೆ ಅದರೊಳಕ್ಕೆ (ಸಮುದ್ರದೊಳಕ್ಕೆ) ಒಯ್ದುಬಿಡುವ ಹಾಗೂ ನಿಮ್ಮ ಕೃತಘ್ನತೆಯ ಕಾರಣ ಭಾರೀ ಬಿರುಗಾಳಿಯ ಸುಳಿಯೊಂದು ನಿಮ್ಮನ್ನು ಮುಳುಗಿಸಿಬಿಡುವ ಸಾಧ್ಯತೆಯ ಕುರಿತು ನೀವು ನಿರ್ಭೀತರಾಗಿರುವಿರಾ? ಆಗಲೂ ನಿಮಗೆ ನಮ್ಮ ಕಡೆಯಿಂದ ಬೆಂಬಲಿಗರು ಯಾರೂ ಸಿಗಲಾರರು
71.(ದೂತರೇ,) ಅವರು (ಧಿಕ್ಕಾರಿಗಳು), ನಾವು ನಿಮಗೆ ದಿವ್ಯವಾಣಿಯ ಮೂಲಕ ನೀಡಿರುವ ಸಂದೇಶದಿಂದ ನಿಮ್ಮನ್ನು ದೂರ ಸರಿಸಿ, ನೀವು ನಮ್ಮ ಹೆಸರಲ್ಲಿ ಬೇರೇನನ್ನಾದರೂ ರಚಿಸಿ ತರುವಂತೆ ಮಾಡಲು ಶ್ರಮಿಸಿದ್ದರು. ಒಂದು ವೇಳೆ ಹಾಗೆ ಆಗಿ ಬಿಟ್ಟಿದ್ದರೆ ಅವರು ನಿಮ್ಮನ್ನು ಪರಮ ಆಪ್ತನಾಗಿ ಕಾಣುತ್ತಿದ್ದರು
78.ಮತ್ತು ಹೇಳಿರಿ; ನನ್ನೊಡೆಯಾ, ನೀನು ನನ್ನನ್ನು ತಲುಪಿಸುವಲ್ಲಿಗೆಲ್ಲಾ ಸತ್ಯದೊಂದಿಗೇ ತಲುಪಿಸು ಹಾಗೂ ನನ್ನನ್ನು ನೀನು ಹೊರಡಿಸುವ ಎಲ್ಲೆಡೆಯಿಂದಲೂ ಸತ್ಯದೊಂದಿಗೇ ಹೊರಡಿಸು ಮತ್ತು ನಿನ್ನ ಕಡೆಯಿಂದ ನನಗೆ ಸಹಾಯಕ ಶಕ್ತಿಯನ್ನು ಒದಗಿಸು
81.ನಾವು ಮಾನವನಿಗೆ ಕೊಡುಗೆಗಳನ್ನು ದಯಪಾಲಿಸಿದಾಗ ಅವನು (ನಮ್ಮನ್ನು ಕಡೆಗಣಿಸುತ್ತಾ) ಮುಖ ತಿರುಗಿಸಿಕೊಳ್ಳುತ್ತಾನೆ ಮತ್ತು ಮಗ್ಗಲು ಬದಲಾಯಿಸುತ್ತಾನೆ. ಇನ್ನು ಅವನಿಗೇನಾದರೂ ಹಾನಿ ಸಂಭವಿಸಿದರೆ, ಅವನು ಹತಾಶನಾಗಿ ಬಿಡುತ್ತಾನೆ
90.ಅಥವಾ ನೀವೇ ಹೇಳಿಕೊಳ್ಳುವಂತೆ, ಆಕಾಶದಿಂದ ತುಂಡುಗಳನ್ನು ನೀವು ನಮ್ಮ ಮೇಲೆ ಬೀಳಿಸುವ ತನಕ ಅಥವಾ ನೀವು ಅಲ್ಲಾಹನನ್ನು ಮತ್ತು ಮಲಕ್‌ಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುವ ತನಕ (ನಾವು ನಂಬಲಾರೆವು). 93. ಅಥವಾ ನಿಮ್ಮ ಬಳಿ ಬಂಗಾರದ ಒಂದು ಮನೆ ಇರುವ ತನಕ ಅಥವಾ ನೀವು ಆಕಾಶಕ್ಕೆ ಏರಿ ಹೋಗುವ ತನಕ (ನಾವು ನಂಬಲಾರೆವು). ಇನ್ನು ನೀವು ಅಲ್ಲಿಂದ, ನಾವು ಓದಬಹುದಾದ ಒಂದು ಗ್ರಂಥವನ್ನು ನಮಗಾಗಿ ಇಳಿಸಿ ಕೊಡುವ ತನಕ ನೀವು ಏರಿ ಹೋಗಿರುವುದನ್ನೂ ನಾವು ನಂಬಲಾರೆವು (ಎಂದು ಅವರು ಹೇಳುತ್ತಾರೆ). ನೀವು ಹೇಳಿರಿ; ನನ್ನ ಒಡೆಯನು ಪರಮ ಪಾವವನು. ನಾನು ದೂತನಾಗಿರುವ ಒಬ್ಬ ಮಾನವ ಮಾತ್ರನಲ್ಲವೇ
94.ಯಾರಿಗೆ ಅಲ್ಲಾಹನು ದಾರಿ ತೋರಿದನೋ ಅವನು ಮಾತ್ರ ಸರಿದಾರಿಯಲ್ಲಿರುತ್ತಾನೆ. ಇನ್ನು ಅವನು ದಾರಿಗೆಡಿಸಿ ಬಿಟ್ಟವರಿಗಾಗಿ ನೀವು ಅವನ ಹೊರತು ಬೇರಾವ ರಕ್ಷಕನನ್ನೂ ಕಾಣಲಾರಿರಿ. ಪುನರುತ್ಥಾನ ದಿನ ನಾವು ಅವರನ್ನು, ಅವರ ಮುಖಗಳು ನೆಲಕ್ಕೆ ಒರಗಿರುವ ಸ್ಥಿತಿಯಲ್ಲಿ, ಕುರುಡರಾಗಿಯೂ ಮೂಗರಾಗಿಯೂ ಕಿವುಡರಾಗಿಯೂ ಒಟ್ಟು ಸೇರಿಸುವೆವು. ನರಕವೇ ಅವರ ನೆಲೆಯಾಗಿರುವುದು. ಅದರ ಬೆಂಕಿಯು ಮಂದವಾದಂತೆಲ್ಲಾ ನಾವು ಮತ್ತೆ ಅದನ್ನು ಭುಗಿಲೆಬ್ಬಿಸುತ್ತಿರುವೆವು
95.ಇದು, ಅವರು ನಮ್ಮ ವಚನಗಳನ್ನು ಧಿಕ್ಕರಿಸಿದ್ದಕ್ಕಾಗಿ ಮತ್ತು ‘‘ನಾವು ಕೇವಲ ಎಲುಬುಗಳಾಗಿಯೂ ಛಿದ್ರ ಛಿದ್ರರಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಮತ್ತೆ ಹೊಸದಾಗಿ ಸೃಷ್ಟಿಸಿ ಜೀವಂತಗೊಳಿಸಲಾಗುವುದೇ?’’ ಎಂದುದಕ್ಕಾಗಿ ಅವರಿಗೆ ಸಿಗಲಿರುವ ಪ್ರತಿಫಲವಾಗಿದೆ
96.ಅವರೇನು ಕಾಣುತ್ತಿಲ್ಲವೇ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು, ಅವರಂತಹವರನ್ನು ಸೃಷ್ಟಿಸಲು ಖಂಡಿತ ಶಕ್ತನಾಗಿರುವನೆಂದು? ನಿಜವಾಗಿ ಅವನು ಅವರಿಗೆ ಒಂದು ಅವಧಿಯನ್ನು ನಿಶ್ಚಯಿಸಿರುವನು – ಅದರಲ್ಲಿ ಸಂಶಯವೇನೂ ಇಲ್ಲ. ಆದರೂ ಅಕ್ರಮಿಗಳು ಧಿಕ್ಕಾರದ ನೀತಿಯಲ್ಲೇ ಸ್ಥಿರರಾಗಿದ್ದಾರೆ
97.ಹೇಳಿರಿ; ಒಂದು ವೇಳೆ ನನ್ನ ಒಡೆಯನ ಭಂಡಾರಗಳೆಲ್ಲಾ ನಿಮ್ಮ ಮಾಲಕತ್ವದಲ್ಲಿ ಇದ್ದಿದ್ದರೆ, ಎಲ್ಲಿ ಖರ್ಚಾಗಿ ಬಿಡುವುದೋ ಎಂಬ ಭಯದಿಂದ ನೀವು ಅದನ್ನೆಲ್ಲಾ ತಡೆದಿಟ್ಟುಕೊಳ್ಳುತ್ತಿದ್ದಿರಿ – ಮಾನವನು ನಿಜಕ್ಕೂ ತೀರಾ ಸಣ್ಣ ಮನಸ್ಸಿನವನಾಗಿದ್ದಾನೆ
98.ನಾವು ಮೂಸಾರಿಗೆ ಸ್ಪಷ್ಟವಾದ ಒಂಭತ್ತು ಪುರಾವೆಗಳನ್ನು ನೀಡಿದ್ದೆವು. ನೀವು ಇಸ್ರಾಈಲರ ಸಂತತಿಗಳೊಡನೆ ಕೇಳಿ ನೋಡಿರಿ. ಅವರ ಬಳಿಗೆ ಅವರು (ಮೂಸಾ) ಬಂದಾಗ ಅವರೊಡನೆ ಫಿರ್‌ಔನ್ ಹೇಳಿದನು; ಓ ಮೂಸಾ, ನಾನಂತು ನಿನ್ನನ್ನು ಮಾಟಪೀಡಿತನೆಂದೇ ಭಾವಿಸುತ್ತೇನೆ
99.ಅವರು (ಮೂಸಾ) ಹೇಳಿದರು; ಇವುಗಳನ್ನೆಲ್ಲಾ (ಜನರ) ಕಣ್ಣು ತೆರೆಸಲಿಕ್ಕಾಗಿ ಆಕಾಶಗಳ ಮತ್ತು ಭೂಮಿಯ ಒಡೆಯನೇ ಇಳಿಸಿ ಕೊಟ್ಟಿರುವನೆಂಬುದು ನಿನಗೆ ಚೆನ್ನಾಗಿ ತಿಳಿದಿದೆ. ಓ ಫಿರ್‌ಔನ್, ನಾನಂತು ನಿನ್ನನ್ನು ಸರ್ವನಾಶವಾಗುವವನೆಂದು ಭಾವಿಸುತ್ತೇನೆ
107.ನೀವು (ಅವನನ್ನು) ಅಲ್ಲಾಹನೆಂದು ಕರೆಯಿರಿ ಅಥವಾ ರಹ್ಮಾನನೆಂದು ಕರೆಯಿರಿ. ನೀವು ಅವನನ್ನು ಏನೆಂದು ಕರೆದರೂ ಅತ್ಯುತ್ತಮ ಹೆಸರುಗಳೆಲ್ಲಾ ಅವನಿಗಾಗಿಯೇ ಇವೆ. ನೀವು ನಿಮ್ಮ ನಮಾಝ್‌ಗಳಲ್ಲಿ ಹೆಚ್ಚು ಧ್ವನಿಯೇರಿಸಬೇಡಿ ಮತ್ತು ಅವುಗಳನ್ನು ತೀರಾ ನಿಶ್ಯಬ್ದಗೊಳಿಸಲೂ ಬೇಡಿ. ಅವೆರಡರ ನಡುವಿನ (ಮಧ್ಯಮ) ಮಾರ್ಗವನ್ನು ಅನುಸರಿಸಿರಿ
108.ಹೇಳಿರಿ; ಎಲ್ಲ ಹೊಗಳಿಕೆಗಳು ಅಲ್ಲಾಹನಿಗೆ ಮೀಸಲು. ಅವನು ಯಾರನ್ನೂ ತನ್ನ ಪುತ್ರನಾಗಿಸಿಕೊಂಡಿಲ್ಲ. ವಿಶ್ವಾಧಿಪತ್ಯದಲ್ಲಿ ಅವನಿಗೆ ಯಾರೂ ಪಾಲುದಾರರಿಲ್ಲ. ತನ್ನನ್ನು ದೌರ್ಬಲ್ಯದಿಂದ ರಕ್ಷಿಸುವ ಸಹಾಯಕರ ಅಗತ್ಯವೂ ಅವನಿಗಿಲ್ಲ. ನೀವು ಅವನ ಮಹಿಮೆಯನ್ನು ಕೊಂಡಾಡಬೇಕಾದ ರೀತಿಯಲ್ಲಿ ಕೊಂಡಾಡಿರಿ
110.ಅದು (ಕುರ್‌ಆನ್) ಸಂಪೂರ್ಣ ನೇರವಾಗಿದೆ. ಅವನ ಕಡೆಯಿಂದ (ದುಷ್ಟರಿಗೆ) ತೀವ್ರ ಶಿಕ್ಷೆಯ ಎಚ್ಚರಿಕೆ ನೀಡಲಿಕ್ಕಾಗಿ ಮತ್ತು ಸತ್ಕರ್ಮ ಮಾಡುವ ವಿಶ್ವಾಸಿಗಳಿಗೆ ಶ್ರೇಷ್ಠ ಪ್ರತಿಫಲವಿದೆ ಎಂಬ ಶುಭವಾರ್ತೆ ನೀಡಲಿಕ್ಕಾಗಿ (ಅದನ್ನು ಕಳಿಸಲಾಗಿದೆ)